Cinisuddi Fresh Cini News 

“ಧರಣಿ ಮಂಡಲ ಮಧ್ಯದೊಳಗೆ” ಹೈಪರ್ ಶೈಲಿಯ ಕ್ರೈಂ ಡ್ರಾಮಾ

ಯುವ ಪಡೆಗಳು ಸೇರಿಕೊಂಡು ಒಂದು ವಿಭಿನ್ನ ಬಗೆಯ ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಕಥಾನಕವನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ಈ ರೀತಿಯ ವಿಭಿನ್ನ ಕಥಾನಕ ಬಂದಿಲ್ಲ ಎಂಬ ಮಾತು ಚಿತ್ರತಂಡದ್ದು. ಈ ಹಿಂದೆ ಗುಳ್ಟು ಚಿತ್ರದ ಮೂಲಕ ಗಮನ ಸೆಳೆದ ಯುವ ನಟ ನವೀನ್ ಶಂಕರ್ ಮತ್ತು ವಾಸ್ತುಪ್ರಕಾರದ ಬೆಡಗಿ ಐಶಾನಿ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಗಿ ತಮ್ಮ ಚಿತ್ರದ ಅನುಭವಗಳನ್ನು ಹಂಚಿಕೊಂಡರು.

ಈ “ಧರಣಿ ಮಂಡಲ ಮಧ್ಯದೊಳಗೆ” ಎಂಬ ಪುಣ್ಯಕೋಟಿಯ ಪದ್ಯ ಯಾರಿಗೆ ತಾನೇ ತಿಳಿದಿಲ್ಲ. ಇದೀಗ ಇದೇ ಟೈಟಲ್ ನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಯಹಸ್ತದಿಂದ ಬಿಡುಗಡೆಯಾಗಿದ್ದ ಪೋಸ್ಟರ್ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇತ್ತೀಚೆಗಷ್ಟೆ ಬಿಡುಗಡೆಯಾದ ಹಾಡು ಚಿತ್ರರಸಿಕರ ಮನ ಗೆದ್ದಿತ್ತು. ಇದು ಗೋವು ಹಾಗೂ ಹುಲಿಯ ಕಥೆಯೋ… ಅಲ್ಲವೋ ತಿಳಿದಿಲ್ಲ. ಆದರೆ ವಿಭಿನ್ನ ಪ್ರಯತ್ನದ ಮೂಲಕ ಸೂಕ್ಷ್ಮ ವಿಚಾರವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಹಾದಿಯಲ್ಲಿ ಹೊರಟಿರುವದಂತೂ ಸತ್ಯ ಎನ್ನಬಹುದು.

ಈ ಚಿತ್ರದಲ್ಲಿ ಯುವ ಪಡೆಗಳ ಬಳಗವೇ ಸೇರಿಕೊಂಡಿದೆ.
ಗುಳ್ಟು ಖ್ಯಾತಿಯ ನವೀನ್ ಶಂಕರ್ ಈ ಸಿನಿಮಾದ ನಾಯಕನಾಗಿ ಅಭಿನಯಿಸಿದ್ದು , ಸ್ಯಾಂಡಲ್ ವುಡ್ ಶಾಕುಂತಲೆ ಐಶಾನಿ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಯಶ್ ಶೆಟ್ಟಿ ,ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡ್, ಓಂಕಾರ್,ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭಾವಿ ಹಾಗೂ ಹಿರಿಯ ನಟ ಕರಿಸುಬ್ಬು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶ್ರೀಧರ್ ಶಿಕಾರಿಪುರ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಪೂರಿ ಜಗನ್ನಾಥ್ ಜೊತೆಗೆ ಶ್ರೀಧರ್ ಕೆಲಸ ಮಾಡಿದ್ದರು.

ನಟ ನವೀನ್ ಮಾತನಾಡುತ್ತಾ ಕಥೆ ಇಂಟ್ರೆಸ್ಟಿಂಗ್ ಆಗಿದೆ. ಆದಿ ಎಂಬ ಪಾತ್ರ ಮಾಡುತ್ತಿದ್ದೇನೆ. ಬಾಕ್ಸಿಂಗ್ ನಲ್ಲಿ ಸಾಧನೆ ಮಾಡಬೇಕೆಂಬ ಕನಸು ಅವನಿಗೆ ಇರುತ್ತೇ. ಈ ಕನಸನ್ನು ನನಸು ಮಾಡಿಕೊಳ್ಳಲು ಹೊರಡುವ ನಾಯಕನಿಗೆ ಒಂದು ಘಟನೆಯಿಂದ ಒಂದಿಷ್ಟು ಪಾತ್ರಗಳು ಅವನ ಜೀವನದಲ್ಲಿ ಬಂದು ಅವನ‌ ಜೀವನ ಹೇಗೆ ತಿರಿವು ಪಡೆದುಕೊಳ್ಳತ್ತದೆ ಅನ್ನೋದು ಸಿನಿಮಾ ಕಥೆ ಎಂದು ತಮ್ಮ ಪಾತ್ರ ಬಗ್ಗೆ ಗುಟ್ಟು ಬಿಟ್ಟುಕೊಟ್ಟರು.

ಇನ್ನು ನಟಿ ಐಶಾನಿ ಶೆಟ್ಟಿ ಮಾತನಾಡುತ್ತಾ ನಾನು ಇಲ್ಲಿವರೆಗೂ ಕಾಣಿಸಿಕೊಳ್ಳದ ಲುಕ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾದಲ್ಲಿ ನನ್ನನ್ನು ಬೇರೆ ರೀತಿ ತೋರಿಸಿದ್ದಕ್ಕೆ ನಿರ್ದೇಶಕ ಶ್ರೀಧರ್ ಅವರಿಗೆ ಧನ್ಯವಾದ. ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು. ಬೋಲ್ಡ್ ಲುಕ್ ನಲ್ಲಿ ನಟಿಸಿದ್ದು, ಈ ರೀತಿ ಪಾತ್ರ ಮಾಡೋದು ನನಗೂ ಚಾಲೆಂಜ್ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇನ್ನು ಉಳಿದಂತೆ ಯಶ್ ಶೆಟ್ಟಿ , ಸಿದ್ದುಮೂಲಿಮನಿ, ಶಾಂಭವಿ, ಜಯಶ್ರಿ ಆರಾದ್ಯ, ಓಂಕಾರ್ , ನಿತೇಶ್ ಮಹಾನ್ ಹಾಗೂ ಕರಿಸುಬ್ಬು ತಮ್ಮ ತಮ್ಮ ಪಾತ್ರಗಳು ವಿಭಿನ್ನವಾಗಿ ಮೂಡಿಬಂದಿದೆ ಎಂದು ಹೇಳಿಕೊಂಡಿದ್ದಾರೆ

ಹಾಗೆ ಈ ಚಿತ್ರದ ನಿರ್ದೇಶಕ ಶ್ರೀಧರ್ ಶಿರಾರಿಪುರ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ನಾನು ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವವನ್ನು ಪಡೆದುಕೊಂಡಿದ್ದೇನೆ. ಈ ಹಿಂದೆ ಈ ರೀತಿಯ ಕಥೆ ಬಂದಿಲ್ಲ ಎಂಬುದು ನನ್ನ ನಂಬಿಕೆ. ಈ ಹಿಂದೆ ಬಂದಂತಹ ಚಿತ್ರಕ್ಕೂ ನಮ್ಮ ಕಥೆಗೂ ಯಾವುದೇ ಸಂಬಂಧವಿಲ್ಲ, ಚಿತ್ರದ ಶೀರ್ಷಿಕೆ ಅಷ್ಟೆ ಬಳಸಿಕೊಂಡಿದ್ದೇವೆ. ನಾವು “ಧರಣಿ ಮಂಡಲ ಮಧ್ಯದೊಳಗೆ” ತೋರಿಸಲು ಹೊರಟಿರುವುದು ನಮ್ಮ ನಿಮ್ಮೆಲ್ಲರ ಕತೆ ಎಂದು ಹೇಳಿಕೊಂಡಿದ್ದಾರೆ.

ಇದೊಂದು ಹೈಪರ್ ಲಿಂಕ್ ಶೈಲಿಯ ಕ್ರೈಂ ಡ್ರಾಮಾ ಸಿನಿಮಾವಾಗಿದ್ದು, ಈ ಚಿತ್ರವನ್ನು ಓಂಕಾರ್‌ ನಿರ್ಮಿಸಿದ್ದಾರೆ. ವೀರೇಂದ್ರ ಕಾಂಚನ್‌, ಕೆ. ಗೌತಮಿ ರೆಡ್ಡಿ ಅವರು ನಿರ್ಮಾಣಕ್ಕೆ ಸಾಥ್‌ ನೀಡಿದ್ದಾರೆ. ಕೀರ್ತನ್‌ ಪೂಜಾರಿ ಕ್ಯಾಮೆರಾ, ರೋಣದ ಬಕ್ಕೇಶ್‌, ಕಾರ್ತಿಕ್‌ ಚೆನ್ನೋಜಿರಾವ್‌ ಅವರ ಸಂಗೀತ , ಉಜ್ವಲ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಒಟ್ಟಾರೆ ಯುವ ಪಡೆಗಳು ಸೇರಿಕೊಂಡು ನಿರ್ಮಿಸುತ್ತಿರುವ ಈ ಚಿತ್ರ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.

Related posts