Cinisuddi Fresh Cini News 

ಸ್ಪರ್ಶ ರೇಖಾ ನಿರ್ಮಾಣದ ‘ಡೆಮೋಪೀಸ್’ ಚಿತ್ರ ಈ ವಾರ ತೆರೆಗೆ

ಕನ್ನಡ ಚಿತ್ರರಂಗದ ನಟಿಯರಲ್ಲಿ ಬಹುತೇಕರು ನಿರ್ಮಾಪಕಿಯರಾಗಿಯೂ ಗಮನ ಸೆಳೆದಿದ್ದಾರೆ ಈಗ ಬಿಗ್‍ಬಾಸ್ ಖ್ಯಾತಿಯ ಸ್ಪರ್ಶ ರೇಖಾರ ಸರದಿ. ಮೌಲ್ಯಚೇತನ ಮೂವೀಸ್ ಅಡಿಯಲ್ಲಿ ವಿತರಣೆಯಾಗುತ್ತಿರುವ ಡೆಮೋಪೀಸ್ ಎಂಬ ಚಿತ್ರವನ್ನು ರೇಖಾ ನಿರ್ಮಿಸಿದ್ದು ಈ ವಾರ ಪ್ರೇಮಿಗಳ ದಿನಾಚರಣೆಯ ಕೊಡುಗೆಯಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದ್ದು ಚಿತ್ರ ಬಿಡುಗಡೆಯಾಗುವ ವಿಷಯ ತಿಳಿಸಲೆಂದೇ ಚಿತ್ರತಂಡದವರು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ವೇಳೆ ಚಿತ್ರದ ಹಾಡುಗನ್ನು ಬಿಡುಗಡೆ ಮಾಡಲಾಯಿತು.

ಇತ್ತೀಚೆಗೆ ಬಿಡುಗಡೆಗೊಂಡಿದ್ದ ಡೆಮೋ ಪೀಸ್‍ನ ಟ್ರೈಲರ್‍ಗೆ ಸಾಕಷ್ಟು ರೆಸ್ಪಾನ್ಸ್ ಸಿಕ್ಕಿರುವುದರಿಂದ ರೇಖಾರ ಮೊಗದಲ್ಲಿ ಗೆಲುವಿನ ನಗೆ ಮೂಡಿದೆ. ಹಲವು ಚಿತ್ರ ನಿರ್ದೇಶಕರ ಬಳಿ ಕೆಲಸ ಮಾಡಿರುವ ನಿರ್ದೇಶಕ ವಿವೇಕ್ ಡೆಮೋಪೀಸ್‍ಗೆ ಸ್ವತಂತ್ರ ನಿರ್ದೇಶಕರಾಗುವುದರೊಂದಿಗೆ ನಿರ್ಮಾಣದಲ್ಲಿ ರೇಖಾಗೆ ಸಾಥ್ ನೀಡಿದ್ದಾರೆ. ಅಲ್ಲದೆ ಚಿತ್ರಕ್ಕೆ ಇವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಕಾಲೇಜ್ ವಿದ್ಯಾರ್ಥಿಯೊಬ್ಬನ ಸುತ್ತ ನಡೆಯುವ ಕಥೆ. ಅವನ ಸುತ್ತ ನಡೆಯುವ ಬೆಳವಣಿಗೆಗಳೇ ಈ ಸಿನಿಮಾದ ಕಥಾವಸ್ತು. ಈ ಪೀಳಿಗೆಯ ಬಹಳಷ್ಟು ಯುವಜನರು ಬಾಂಧವ್ಯ, ಸಂಬಂಧಗಳಿಗೆ ಬೆಲೆ ಕೊಡೋದಿಲ್ಲ. ಅವರಿಗೆ ಹಣಾನೇ ಮುಖ್ಯ. ಹಣಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರುವ ವಿಷಯಗಳು ಇವೆ ಅನ್ನೋ ಒಂದು ಸಂದೇಶ ಈ ಫಿಲಂನಲ್ಲಿದೆ.ಇದರಲ್ಲಿ ಮನರಂಜನಾತ್ಮಕವಾದ ಎಲ್ಲ ವಿಷಯಗಳೂ ಇವೆ. ಕುಟುಂಬ ಸಮೇತ ಬಂದು ನೋಡಬಹುದಾದ ಫ್ಯಾಮಿಲಿ ಫಿಲಂ.

ನಿರೀಕ್ಷೆಗೂ ಮೀರಿ ಒಳ್ಳೇ ಅಭಿನಯ ಮಾಡಿದ್ದಾರೆ. ಅವರ ಅಭಿನಯ ಹಾಗೂ ಮೌಲ್ಯಯುತ ಕಥೆಯಿಂದ ಈ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ.ಪ್ರತಿಯೊಬ್ಬರಿಗೂ ಅಪ್ಪ ಅಮ್ಮ ಇದ್ದಾರೆ. ಮಕ್ಕಳಿರ್ತಾರೆ. ಅವರ ವರ್ತನೆ ಹೇಗಿರಬೇಕು ಅಂತ ತೋರಿಸುವ ಪ್ರಯತ್ನ ಮಾಡಿದೀವಿ ಎನ್ನುತ್ತಾರೆ ನಿರ್ದೇಶಕ ವಿವೇಕ್.

ಬ್ರಹ್ಮಗಂಟು ಖ್ಯಾತಿಯ ಭರತ್ ಬೋಪಣ್ಣ ನಾಯಕನಾಗಿ ಕಾಣಿಸಿಕೊಂಡಿದ್ದರೆ, ಪಂಚತಂತ್ರದಲ್ಲಿ ನಟಿಸಿದ್ದ ಸೋನಲ್‍ಮಾಂತೆರೋ ನಾಯಕಿಯಾಗಿ, ನಿರ್ಮಾಪಕಿ ಸ್ಪರ್ಶ ರೇಖಾ ನಾಯಕನ ತಾಯಿಯಾಗಿದ್ದರೆ, ಉಳಿದ ಪಾತ್ರವರ್ಗದಲ್ಲಿ ಶ್ರೀಕಾಂತ್ ಹೆಬ್ಳೀಕರ್, ರೂಪೇಶ್, ಚಂದ್ರಚೂಡ್, ರೋಹಿತ್ ಮುಂತಾದವರು ಈ ಚಿತ್ರದ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರೇಖಾ ಮೂವೀಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ ಡೆಮೋ ಪೀಸ್ ಚಿತ್ರಕ್ಕೆ ಚಿತ್ರಕ್ಕೆ ಬಾಲ ಸರಸ್ವತಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಹುಲಿರಾಯ ಖ್ಯಾತಿಯ ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ. ಬೆಂಗಳೂರು, ತುಮಕೂರು ಸುತತಿಮುತತಿ ಚಿತ್ರೀಕರಿಸಲಾಗಿರುವ ಈ ಚಿತ್ರದ ಹಾಡುಗಳನ್ನು ದಾಂಡೇಲಿಯಲ್ಲಿ ಶೂಟ್ ಮಾಡಲಾಗಿದೆ.

ಸ್ಪರ್ಶ, ಮೆಜೆಸ್ಟಿಕ್ ಚಿತ್ರಗಳ ನಂತರ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಬಿಂಬಿಸಿಕೊಂಡಿರುವ ಸ್ಪರ್ಶ ರೇಖಾ ಅವರು ಡೆಮೋಪೀಸ್ ಚಿತ್ರದಿಂದ ಉತ್ತಮ ನಿರ್ಮಾಪಕಿ ಆಗಿ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವಂತಾಗಲಿ.

Share This With Your Friends

Related posts