Cinisuddi Fresh Cini News 

ಆ. 15ಕ್ಕೆ ಬರಲಿದೆ ‘ಡಿಯರ್ ಸತ್ಯ’ ಚಿತ್ರದ ಟೀಸರ್

 

ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ‘ಡಿಯರ್ ಸತ್ಯ’. ಕನ್ನಡದ ಮೊಟ್ಟಮೊದಲ ಓಟಿಟಿ ಒರಿಜಿನಲ್ ಚಿತ್ರ ಭಿನ್ನ. ಈ ಸಿನಿಮಾದ ಅಭೂತಪೂರ್ವ ಗೆಲುವಿನ ನಂತರ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಆಕ್ಷನ್ ರಿವೇಂಜ್, ಥ್ರಿಲ್ಲರ್ ಚಿತ್ರ ‘ಡಿಯರ್ ಸತ್ಯ’.

ಸದಾ ಗಿಜಿಗುಡುವ, ಗದ್ದಲದ ಊರು ಬೆಂಗಳೂರು. ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಒತ್ತಡಗಳು, ಜಂಜಾಟಗಳಿರುತ್ತವೆ. ಇವೆಲ್ಲದರ ನಡುವೆ ಸಾಮಾನ್ಯನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಕಥಾ ಹಂದರ ‘ಡಿಯರ್ ಸತ್ಯ’ನದ್ದು.

ನಾಯಕನ ವಿರುದ್ಧ ಪಿತೂರಿ ನಡೆಸುವ ಸಂದರ್ಭೋಚಿತ ಘಟನೆಗಳೊಂದಿಗೆ ತೀವ್ರ ತಿರುವು ಪಡೆಯುವ ಅಂಶಗಳನ್ನು ಈ ಕಥೆ ಒಳಗೊಂಡಿದೆ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೇಗ್ ಬಂದ ಎಂಬೆರಡು ರಿಯಾಲಿಟಿ ಶೋಗಳ ನಿರೂಪಕರಾಗಿ, ಬಿಗ್ ಬಾಸ್ ಸೀಸನ್-2 ನ ಸ್ಪರ್ಧಿಯಾಗಿದ್ದವರು ಆರ್ಯನ್ ಸಂತೋಷ್. ನೂರು ಜನ್ಮಕು ಚಿತ್ರದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದ ಆರ್ಯನ್ ಸಂತೋಷ್ ಈಗ ‘ಡಿಯರ್ ಸತ್ಯ’ನಾಗಿ ರೀ ಎಂಟ್ರಿ ನೀಡುತ್ತಿದ್ದಾರೆ.

ಇವರ ಜೊತೆಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನೈಜ ಘಟನೆಗಳ ಪ್ರೇರಣೆಯಿಂದ ತಯಾರಾಗಿರುವ ‘ಡಿಯರ್ ಸತ್ಯ’ ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ.

ಕನ್ನಡದಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ, ಜಿಗರ್ ಥಂಡ ಖ್ಯಾತಿಯ ಶಿವಗಣೇಶ್ ‘ಡಿಯರ್ ಸತ್ಯ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ದೃಶ್ಯ, ತ್ರಾಟಕ ಮುಂತಾದ ಸಿನಿಮಾಗಳ ಮೂಲಕ ಹೆಸರು ಮಾಡಿರುವ ವಿನೋದ್ ಭಾರತಿ ‘ಡಿಯರ್ ಸತ್ಯ’ ಚಿತ್ರದ ಛಾಯಾಗ್ರಹರಾಗಿದ್ದಾರೆ.

ಶ್ರೀಧರ್ ವಿ ಸಂಭ್ರಮ್ ಅವರ ಮನಸೆಳೆಯುವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ರಾಜ್ಯಪ್ರಶಸ್ತಿ ವಿಜೇತ ಸುರೇಶ್ ಆರ್ಮುಗಂ ಸಂಕಲನ, ಭಜರಂಗಿ ಮೋಹನ್, ಕಲೈ ಮತ್ತು ಗೀತಾ ನೃತ್ಯ ಸಂಯೋಜನೆ, ‌ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಭಾರ್ಗವಿ ವಿಖ್ಯಾತಿ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

2019ರ ಡಿಸೆಂಬರ್ 27ರಂದು ‘ಡಿಯರ್ ಸತ್ಯ’ ಚಿತ್ರಕ್ಕಾಗಿ ಮುಹೂರ್ತ ನಡೆಸಲಾಗಿತ್ತು. ಅದೇ ದಿನ ಚಿತ್ರೀಕರಣ ಕೂಡಾ ಆರಂಭವಾಗಿ, 2020 ರ ಮಾರ್ಚ್ 4ರಂದು ಶೂಟಿಂಗ್ ಪೂರ್ಣಗೊಂಡಿತ್ತು.

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಡಿಯರ್ ಸತ್ಯ’ ಚಿತ್ರದ ಬಹು ನಿರೀಕ್ಷಿತ ಟೀಸರ್ ಆಗಸ್ಟ್15ರಂದು ಪರ್ಪಲ್ ರಾಕ್ ಎಂಟರ್ ಟೈನರ್ಸ್ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಳ್ಳಲಿದೆ.

Share This With Your Friends

Related posts