Cinisuddi Fresh Cini News 

ಪ್ರೀತಿ, ಗೆಳೆತನ , ಆರ್ಭಟದ “ದಸರಾ” (ಚಿತ್ರವಿಮರ್ಶೆ-ರೇಟಿಂಗ್ : 4 /5)

ರೇಟಿಂಗ್ : 4 /5

ಚಿತ್ರ : ದಸರಾ
ನಿರ್ದೇಶಕ : ಶ್ರೀಕಾಂತ್ ಒಡೆಲಾ
ನಿರ್ಮಾಪಕ : ಸುಧಾಕರ್ ಚೆರುಕುರಿ
ಸಂಗೀತ: ಸಂತೋಷ್ ನಾರಾಯಣನ್
ಛಾಯಾಗ್ರಹಣ : ಸತ್ಯನ್ ಸೂರ್ಯನ್
ತಾರಾಗಣ : ನಾನಿ , ದೀಕ್ಷಿತ್ ಶೆಟ್ಟಿ , ಕೀರ್ತಿ ಸುರೇಶ್, ಸಮುದ್ರ ಕಣಿ, ಪೂರ್ಣ ಸಾಯಿಕುಮಾರ್, ಶೈನ್ ಟಾಮ್ ಚಾಕೊ ಹಾಗೂ ಮುಂತಾದವರು…

ಜೀವನದಲ್ಲಿ ಬದುಕಿಗಾಗಿ ನಾನಾ ಮಾರ್ಗಗಳು ಇರುತ್ತದೆ. ಮನುಷ್ಯನಲ್ಲಿ ಹಟ ಚಟ ಯಾವ ಹಂತಕ್ಕೆ ಬೇಕಾದರೂ ಕರೆದುಕೊಂಡು ಹೋಗುತ್ತದೆ. ಅಂತದ್ದೇ ಒಂದು ಊರಿನ ಕುಡುಕರ ಗುಂಪು ಒಂದಾದರೆ , ಬದುಕಿಗಾಗಿ ಹೆಣ್ಣುಮಕ್ಕಳ ಹೊಡೆದಾಟ , ಇದರ ನಡುವೆ ರಾಜಕೀಯದ ಕುತಂತ್ರದ ಒಳಗೆ ನಿರ್ಮಲವಾದ ಪ್ರೀತಿ , ಗೆಳೆತನ, ತ್ಯಾಗ , ಹೊಡೆದಾಟ, ದುಷ್ಟರ ವಿರುದ್ಧ ತೊಡೆತಟ್ಟಿ ನಿಲ್ಲುವ ಕಥಾಂದರವಾಗಿ ಮೂಲ ತೆಲುಗು ಭಾಷೆಯ ಚಿತ್ರವಾದ “ದಸರಾ” ಈಗ ಬಹು ಭಾಷೆಗಳಲ್ಲಿ ಈ ವಾರ ಬಿಡುಗಡೆಯಾಗಿದೆ.

ಇಡೀ ಗ್ರಾಮದ ಜನರೇ ವ್ಯಕ್ತಿ ಒಬ್ಬನಿಗಾಗಿ ಕಾಯುತ್ತಿರುತ್ತಾರೆ. ಅದುವೇ ಊರಿನ ಕುಡುಕ ಕುಡುಕರ ಅಡ್ಡ ಸಿಲ್ಕ್ ಬಾರ್. ಎಣ್ಣೆ ಸಿಗುತ್ತಿದಂತೆ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗುತ್ತದೆ. ಇದೇ ಸಮಯಕ್ಕೆ ಟಿವಿಯಲ್ಲಿ ಬರುವ ಸ್ಫೋಟಕ ಸುದ್ದಿ. ಇನ್ನು ಮುಂದೆ ಎಣ್ಣೆ ಅಂಗಡಿ ನಿಷೇಧ ಎಂದು ಕಂಗಾಲಾಗುವ ಜನರು.

ನೋಡೋ ನೋಡುತ್ತಿದ್ದಂತೆ ಒಂದು ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಶಾಲಾ ದಿನಗಳಿಂದಲೂ ಒಟ್ಟೊಟ್ಟಿಗೆ ಓದುತ್ತಾ ಬೆಳೆಯುವ ಧರಣಿ (ನಾಣಿ) , ಸೂರಿ (ದೀಕ್ಷಿತ್ ಶೆಟ್ಟಿ), ವೆನಿಲಾ (ಕೀರ್ತಿ ಸುರೇಶ್) ಈ ಮೂವರ ಗೆಳೆತನ , ಸ್ನೇಹ ಊರಿನ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ವೀರ್ಲಪಲ್ಲಿ ಎಂಬ ಗ್ರಾಮದಲ್ಲಿ ಬೆಳೆದು ದೊಡ್ಡವರಾಗುವ ಈ ಮೂವರು. ನಾಯಕ ಧರಣಿ , ಮತ್ತೊಬ್ಬ ನಾಯಕ ಸೂರಿ ಟ್ರೈನಿನಲ್ಲಿ ಸಾಗುವ ಕಲ್ಲಿದ್ದಲನ್ನ ಕದ್ದು ಗೆಳೆಯರೊಟ್ಟಿಗೆ ಓಡಾಡಿಕೊಂಡು ಕಾಲ ಕಳೆಯುತ್ತಾರೆ. ಇದರ ನಡುವೆ ವೆನಿಲ್ಲಾ ಅಂಗನವಾಡಿ ಟೀಚರ್ ಆಗಿ ಮಕ್ಕಳಿಗೆ ಪಾಠ ಹೇಳಿಕೊಳ್ಳುತ್ತಿರುತ್ತಾಳೆ.

ಬಾಲ್ಯದಲ್ಲೇ ನಾಯಕಿ ವೆನ್ನೆಲಾ ಮೇಲೆ ನಾಯಕ ಧರಣಿಗೆ ಪ್ರೀತಿಯಾದರೂ ಅದನ್ನು ಹೇಳುವ ಧೈರ್ಯವಿರುವುದಿಲ್ಲ. ಆದರೆ ನಾಯಕಿ ವೆನಿಲ್ಲಾ ಮತ್ತು ಸೂರಿ ಪರಸ್ಪರ ಪ್ರೀತಿಸುವ ವಿಷಯ ತಿಳಿದ ಧರಣಿ ಗೆಳೆಯನಿಗಾಗಿ ತನ್ನ ಪ್ರೀತಿಯನ್ನು ಮುಚ್ಚಿಡುತ್ತಾನೆ. ಯಾವುದೇ ಕೆಲಸವಿಲ್ಲದ ಸೂರಿಗೆ ಮಗಳನ್ನ ಕೊಡಲು ಮನೆಯವರು ಒಪ್ಪದಿದ್ದಾಗ ಧರಣಿ ಮುಂದೆ ನಿಂತು ಊರಿನ ಬಾರ್ ಕ್ಯಾಷರ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಇಬ್ಬರ ಮದುವೆಗೆ ದಾರಿ ಮಾಡಿಕೊಳ್ಳುತ್ತಾನೆ.

ಇದಕ್ಕಾಗಿ ಊರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗೆ ಅಸ್ತ್ರವಾಗಿ ಎದುರಾಗುತ್ತದೆ. ಇನ್ನು ಆ ಊರಿನಲ್ಲಿ ಸಹೋದರರಾದ ಶಿವಣ್ಣ (ಸಮುದ್ರಕಣಿ) ಹಾಗೂ ರಾಜಣ್ಣ ( ಸಾಯಿಕುಮಾರ್) ಇಬ್ಬರ ರಾಜಕೀಯದ ಹಗ್ಗ ಜಗ್ಗಾಟ. ಶಿವಣ್ಣನ ಮಗ ನಂಬಿ ( ಟಾಮ್ ಚಾಕೋ ) ಪಂಚಾಯತ್ ರಾಜಕೀಯದ ಜತೆಗೆ ಊರಿನಲ್ಲಿ ಎಣ್ಣೆ ಅಂಗಡಿ ನಡ್ಸುತ್ತಾ ತನ್ನದೇ ಗುಂಪನ್ನ ಕಟ್ಟಿಕೊಂಡಿರುತ್ತಾನೆ.

ತಾನು ಇಷ್ಟಪಟ್ಟದ್ದನ್ನು ಪಡೆಯುವ ರಾವಣನಾಗಿ ಆರ್ಭಟಿಸುತ್ತಿರುತ್ತಾನೆ. ಇತ್ತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲ್ಲುವ ಧರಣಿ , ಸೂರಿ ತಂಡಕ್ಕೆ ಬಹುಮಾನದ ಜೊತೆಗೆ ಬಾರ್ ಕ್ಯಾಶಿಯರ್ ಕೆಲಸವು ಸಿಗುತ್ತದೆ. ಅದೇ ಖುಷಿಯಲ್ಲಿ ಸೂರಿ ಹಾಗೂ ವೆನಿಲ್ಲಾ ಮದುವೆ ಸಂಭ್ರಮದಿಂದ ನಡೆಯುತ್ತದೆ. ಮೊದಲ ರಾತ್ರಿ ಸಿದ್ಧತೆಯ ನಡುವೆ ಸೂರಿಗೆ ಧರಣಿಗೆ ವೆನಿಲ್ಲಾ ಮೇಲೆ ಬಾಲ್ಯದಿಂದ ಇರುವ ಪ್ರೀತಿ ವಿಚಾರ ತಿಳಿಯುತ್ತದೆ.

ಮುಂದೇನು ಅನ್ನುವಷ್ಟರಲ್ಲಿ ಮಚ್ಚು ಲಾಂಗು ಹಿಡಿದ ಗುಂಪೊಂದು ಧರಣಿ , ಸೂರಿ ತಂಡದವರ ಮೇಲೆ ಅಟ್ಯಾಕ್ ನಡೆಯುತ್ತದೆ. ತಪ್ಪಿಸಿಕೊಳ್ಳುವ ಮಾರ್ಗ ಮಧ್ಯೆ ಸೂರಿ ತಲೆ ಕಡಿಯುತ್ತಾರೆ. ಇಲ್ಲಿಂದ ಚಿತ್ರದ ಓಟ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಇಲ್ಲಿಂದ ಕುತೂಹಲವನ್ನು ಮೂಡಿಸಿ ಕ್ಲೈಮಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ.
ಸೂರ್ಯನ ಕೊಂದವರು ಯಾರು…
ಕಾರಣ ಏನು…
ವೆನಿಲ್ಲಾ ಗತಿ ಏನು…
ಧರಣಿ ಏನು ಮಾಡುತ್ತಾನೆ…
ಕ್ಲೈಮಾಕ್ಸ್ ಸಿಗುವ ಉತ್ತರ ಏನು…
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ದಸರಾ ಚಿತ್ರ ನೋಡಬೇಕು.

ಇನ್ನು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ ನಾಯಕ ನಾನಿ. ಮುಗ್ಧ ಪ್ರೇಮಿಯಾಗಿ, ಗಲಾಟೆಗೆ ಹೋಗದ ಸಾದುವಿನಂತೆ , ಗೆಳೆಯನಿಗಾಗಿ ಏನು ಬೇಕಾದರೂ ಮಾಡಲು ಸಿದ್ದ ಎನ್ನುವ ಪಾತ್ರದ ಮೂಲಕ ಸಮಯ, ಸಂದರ್ಭಕ್ಕೆ ಆರ್ಭಟಿಸಲು ಸರಿ ಎನ್ನುವ ಹಾಗೆ ಪರದೆಯ ಮೇಲೆ ಆರ್ಭಟಿಸಿದ್ದಾರೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ರೋಚಕವಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ನಾಯಕಿಯಾಗಿ ಅಭಿನಯಿಸಿರುವ ಕೀರ್ತಿ ಸುರೇಶ್ ಬಹಳ ನೈಜ್ಯವಾಗಿ ಪಾತ್ರ ಜೀವ ತುಂಬಿದ್ದಾರೆ. ಟಪಾಂಗುಚಿ ಸ್ಟೆಪ್ ಒಂದಕ್ಕೆ ಭರ್ಜರಿ ಹೆಜ್ಜೆ ಹಾಕುವ ಮೂಲಕ ಎಲ್ಲರೂ ಗಮನ ಸೆಳೆಯುತ್ತಾರೆ. ಮತ್ತೊಬ್ಬ ಯುವ ಕನ್ನಡದ ಪ್ರತಿಭೆ ದೀಕ್ಷಿತ್ ಶೆಟ್ಟಿ ಕೂಡ ತನ್ನ ಪಾತ್ರಕ್ಕೆ ಜೀವ ತುಂಬಿ ನಟಿಸಿ ತನ್ನ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಇನ್ನು ಹೇಳುತ್ತಾ ಹೋದರೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಕೂಡ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ.

ಪ್ರಥಮ ನಿರ್ದೇಶನದಲ್ಲಿ ಶ್ರೀಕಾಂತ್ ಒಡೆಲಾ ಭರವಸೆಯ ಸಾರಥಿಯಾಗಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿ ಹೇಳಿಕೊಳ್ಳುವಂತ ವಿಶೇಷ ಇಲ್ಲದ್ದರೂ ನೋಡುಗರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯಪಾನವನ್ನು ಸಂಪ್ರದಾಯವೆಂದು ಅನುಸರಿಸಿ ಬದುಕುವ ಊರಿನ ಜನರ ಮೇಲೆ ಈ ರಾಜಕೀಯ ಯಾವ ರೀತಿ ಪರಿಣಾಮ ಬೀರುತ್ತೆ, ಗೆಳೆಯರ ಸ್ನೇಹ , ಪ್ರೀತಿಯ ಸಂಚಲನ , ದುಷ್ಟರ ಆರ್ಭಟವನ್ನು ಬಹಳ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಮೊದಲಾರ್ಧ ಗೆಳೆತನವನ್ನು ಆಳವಾಗಿ ತೋರಿಸಲಾಗಿದೆ. ಮಧ್ಯಂತರದ ಸಮಯಕ್ಕೆ ಕಥೆ ದೊಡ್ಡ ಟ್ವಿಸ್ಟ್ ಪಡೆದುಕೊಳ್ಳಲಿದ್ದು, ದ್ವಿತೀಯಾರ್ಧ ಸಂಪೂರ್ಣ ಎಮೋಷನಲ್ ಜರ್ನಿ ಎಂದೇ ಹೇಳಬಹುದು ಕ್ಲೈಮ್ಯಾಕ್ಸ್ ರೋಮಾಂಚನ ನೀಡುತ್ತದೆ. ಚಿತ್ರದ ಓಟ ಮತ್ತಷ್ಟು ವೇಗ ಮಾಡಬಹುದಿತ್ತು. ಒಂದು ವಿಭಿನ್ನ ಪ್ರಯತ್ನವಾಗಿ ಫ್ಯಾನ್ ಇಂಡಿಯಾ ಮೂಲಕ ಪ್ರೇಕ್ಷಕರಿಗೆ ಈ ಚಿತ್ರವನ್ನು ನೀಡಿರುವ ನಿರ್ಮಾಪಕ ಸುಧಾಕರ್ ಚಿರುಕುರಿ ಧೈರ್ಯ ಮೆಚ್ಚಲೇಬೇಕು. ಇನ್ನುಳಿದಂತೆ ಚಿತ್ರದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಛಾಯಾಗ್ರಹಣ, ರಿಚ್ ಮೇಕಿಂಗ್, ಸಂಕಲನ ಉತ್ತಮವಾಗಿ ಮೂಡಿಬಂದಿದೆ.

ಒಟ್ಟಾರೆಯಾಗಿ ಮಾಸ್ ಕಂಟೆಂಟ್ ಒಳಗೊಂಡಿರುವ “ದಸರಾ” ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಗೆದ್ದಿದೆ.ಆಕ್ಷನ್ ಜೊತೆಗೆ ಭಾವನಾತ್ಮಕವಾಗಿ ಕೂಡ ಗಮನ ಸೆಳೆದಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Related posts