ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ಪವರ್ಸ್ಟಾರ್ ಪುನೀತ್
ಜೀ ಕನ್ನಡದ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ನಲ್ಲಿ ‘ಪವರ್ಸ್ಟಾರ್’ ಪುನೀತ್ರಾಜಕುಮಾರ್ ಭಾಗವಹಿಸಿದ್ದಾರೆ. ಅದ್ಭುತ ನೃತ್ಯದ ಮೂಲಕವೇ ಎಲ್ಲರ ಮೆಚ್ಚುಗೆಗೆ ಹೆಸರಾಗಿರುವ ಅಪ್ಪು ಅವರ ಉಪಸ್ಥಿತಿ ಡಿಕೆಡಿಯ ಎಲ್ಲ ನೃತ್ಯಪಟುಗಳ ಉತ್ಸಾಹ ಹೆಚ್ಚಿಸಿದೆ. ಸ್ಪರ್ಧಿಗಳೊಂದಿಗೆ ಪುನೀತ್ ಸ್ವತಃ ಕುಣಿದು ಅವರೊಂದಿಗೆ ತಾವೂ ಒಬ್ಬರಾದರು. ರಂಗಾದ ವೇದಿಕೆ ಪುನೀತ್ ನೃತ್ಯದಿಂದ ಮತ್ತಷ್ಟು ಕಲರ್ ಆಯಿತು.
ವಿಶೇಷ ಎಂಬಂತೆ ಡಿಕೆಡಿಯ ಸ್ಪರ್ಧಿಯಾಗಿರುವ ಮಾತುಬಾರದ ಮತ್ತು ಕಿವಿ ಕೇಳದ ಚೈತ್ರಾಲಿ ಜತೆಗೂ ಅಪ್ಪು ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ. ಹನಿಕಾ ಮತ್ತು ಮಿಥುನ್ ಜತೆಗೂ ಹೆಜ್ಜೆ ಹಾಕಿದ್ದಾರೆ. ಇದಷ್ಟೇ ಅಲ್ಲ ತೀರ್ಪುಗಾರರಾದ ರಕ್ಷಿತಾ ಪ್ರೇಮ್, ಪುನೀತ್ ಜತೆಗಿನ ಮೊದಲ ಸಿನಿಮಾ ಬಗ್ಗೆ ಹಳೆಯ ನೆನಪುಗಳನ್ನೂ ಹಂಚಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಪುನೀತ್ ಜತೆ ಮೂನ್ ವಾಕ್ ಮಾಡಿ, ಅಚ್ಚರಿ ಮೂಡಿಸಿದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳೆಲ್ಲರಲ್ಲೂ ಪುನೀತ್ ಉಪಸ್ಥಿತಿ ಸಂಚಲನ ಉಂಟು ಮಾಡಿತು. ಈಗಾಗಲೇ ತಮ್ಮ ಪ್ರತಿಭೆಯಿಂದ ಕರ್ನಾಟಕದ ಮನೆ ಮನೆಯ ವೀಕ್ಷಕರನ್ನು ಸೆಳೆದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸ್ಪರ್ಧಿಗಳಿಗೆ ಉತ್ತೇಜನ ನೀಡಿದ್ದಲ್ಲದೆ ಈ ಕಾರ್ಯಕ್ರಮ ತಮ್ಮ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದು ಎಂದರು.
‘ಇದು ನನ್ನ ಅಚ್ಚುಮೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದು. ಸಮಯ ಸಿಕ್ಕಾಗಲೆಲ್ಲ ನೋಡುತ್ತೇನೆ ಎಂದು ಹೇಳಿಕೊಂಡರು. ಸಲಹೆ, ಮಾರ್ಗದರ್ಶನದಿಂದ ನೃತ್ಯಗಾರರಿಗೆ ಸ್ಫೂರ್ತಿ ತುಂಬುವ ನಟ ವಿಜಯ್ ರಾಘವೇಂದ್ರ, ನಟಿ ರಕ್ಷಿತಾ ಪ್ರೇಮ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪುನೀತ್ ಜತೆ ಕಳೆದ ಅಪರೂಪದ ಕ್ಷಣಗಳನ್ನು ಮೆಲುಕು ಹಾಕಿದರು.
ನಿರೂಪಕಿ ಅನುಶ್ರೀ ಎಂದಿನಂತೆ ವಿಶಿಷ್ಟ ಮಾತುಗಾರಿಕೆಯಿಂದಲೇ ಗಮನ ಸೆಳೆದರು. ಈ ವಿಶೇಷ ಸಂಚಿಕೆ ಜೀ ಕನ್ನಡದಲ್ಲಿ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.