Cinisuddi Fresh Cini News 

ನಾಳೆಯಿಂದ ‘ದಬಾಂಗ್’ ಶುರು, ಸಲ್ಮಾನ್ ಜೊತೆ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತರ

ಸಲ್ಮಾನ್‍ಖಾನ್ ನಟಿಸಿರುವ ದಬಾಂಗ್ ಚಿತ್ರಗಳು ಈಗಾಗಲೇ ಬಂದು ಯಶಸ್ವಿಯೂ ಆಗಿದೆ, ಆದರೆ ದಬಾಂಗ್ 3 ಚಿತ್ರವು ಕನ್ನಡ ಪ್ರೇಕ್ಷಕರಿಗೆ ಸ್ಪೆಷಲ್ ಏಕೆಂದರೆ ಇದು ನಿಮ್ಮ ಸಿನಿಮಾ ಎಂದು ಹೇಳಿದವರು ಚುಲ್‍ಬುಲ್ ಪಾಂಡೆಖ್ಯಾತಿಯ ಸಲ್ಮಾನ್‍ಖಾನ್. ಈ ವಾರ ಚಿತ್ರವು ರಾಜ್ಯಾದಾದ್ಯಂತ ಬಿಡುಗಡೆಯಾಗುತ್ತಿದೆ.

ಮೊನ್ನೆ ಈ ಚಿತ್ರವು ಪ್ರೆಸ್‍ಮೀಟ್‍ಯೊಂದನ್ನು ನಗರದ ಮಾಲ್‍ವೊಂದರಲ್ಲಿ ಹಮ್ಮಿಕೊಂಡಿದ್ದರು. ಇಬ್ಬರು ಸ್ಟಾರ್ ನಟರುಗಳಾದ ಸಲ್ಮಾನ್ ಖಾನ್ ಹಾಗೂ ಸುದೀಪ್ ಅವರನ್ನು ನೋಡಲು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸೇರಿದಂತೆ ನೂರಾರೂ ಅಭಿಮಾನಿಗಳು ಕೂಡ ಜಮಾಯಿಸಿದ್ದರು.

ಕನ್ನಡದಲ್ಲೇ ಮಾತು ಆರಂಭಿಸಿದ ಸಲ್ಮಾನ್‍ಖಾನ್, ಎಲ್ಲರಿಗೂ ನಮಸ್ಕಾರ , ನಾನು ದಭಾಂಗ್ 3 ಚಿತ್ರದಲ್ಲಿ ವ ಒಬ್ಬ ಖಳನಟನೊಂದಿಗೆ ನಟಿಸಿಲ್ಲ ಬದಲಿಗೆ ಒಬ್ಬ ಪ್ರಬುದ್ಧ ನಟನೊಂದಿಗೆ ನಟಿಸಿದ್ದೇನೆ ಎಂದು ಸುದೀಪ್‍ರ ಗುಣಗಾನ ಮಾಡಿದರು. ನನಗೆ ಈ ಚಿತ್ರದಲ್ಲಿ ನಟಿಸುವಾಗ ಒಬ್ಬ ಸಹೋದರ ಸಿಕ್ಕಂತಾಗಿದೆ, ಏಕೆಂದರೆ ಸುದೀಪ್ ಅವರು ಪ್ರಬುದ್ಧ ನಟರು ಹಾಗೂ ನನಗಿಂತ ಚಿಕ್ಕವರು ಚಿತ್ರದಲ್ಲಿ ನಮ್ಮಿಬ್ಬರ ಕಾಂಬಿನೇಷನ್ ಪಾತ್ರಗಳಿಗೆ ಹೆಚ್ಚು ಹೈವೋಲ್ಟೇಜ್ ಇದೆ ಅದನ್ನು ಚಿತ್ರಮಂದಿರದಲ್ಲೇ ನೋಡಿ ಖುಷಿಪಡಿ ಎಂದರು. ಇದು ಇಲ್ಲಿಗೆ ಮುಗಿಯುವುದಿಲ್ಲ ದಬಾಂಗ್ 4 ಗಾಗಿ ಈಗಾಗಲೇ ಕಥೆಯು ರೆಡಿಯಾಗಿದೆ ಎಂದಾಗ ಆ ಚಿತ್ರದಲ್ಲೂ ಸುದೀಪ್ ಅವರು ಇರುತ್ತಾರಾ ಎಂದು ಕೇಳಿದಾಗ ಏಕಾಗಬಾರದು ಎಂದು ಸಲ್ಲುಭಾಯ್ ಉತ್ತರಿಸಿದರು.

ನಿಮ್ಮ ಮದುವೆ ಯಾವಾಗ ಎಂದು ಸುದ್ದಿಗಾರರ ಪ್ರಶ್ನೆಗೆ ನಿಖರವಾದ ಉತ್ತರ ಕೊಡದೆ ನುಣುಚಿಕೊಂಡ ಸಲ್ಮಾನ್, ನೀವು ಯಾವಾಗ ಹೇಳಿದರೆ ಆಗ ಎಂದಷ್ಟೇ ಹೇಳಿದರು.ದಬಾಂಗ್ 3 ಚಿತ್ರದಲ್ಲಿ ಇಬ್ಬರು ಹೀರೋಯಿನ್‍ಗಳ ಜೊತೆ ರೊಮ್ಯಾನ್ಸ್ ಮಾಡಿದ್ದು ಖುಷಿ ಕೊಡ್ತು ಎಂದೂ ಹೇಳಿದ್ದಾರೆ.

ನಟ ಸುದೀಪ್ ಮಾತನಾಡಿ, ನಮ್ಮ ಜನರು ಈಗಾಗಲೇ ಸಲ್ಮಾನ್‍ಖಾನ್‍ರ ಚಿತ್ರಗಳನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದ್ದಾರೆ, ಅದೇ ರೀತಿ ದಬಾಂಗ್ 3 ಚಿತ್ರವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಬಾಲಿವುಡ್‍ನಲ್ಲಿ ದೊಡ್ಡ ಬ್ಯಾನರ್‍ನಲ್ಲಿ ನಟಿಸಬೇಕೆಂಬ ಬಯಕೆ ದಬಾಂಗ್ 3 ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದ ಹಾಡುಗಳಲ್ಲಿ ನಾನಿಲ್ಲದಿದ್ದರೂ ಪಾತ್ರವು ತುಂಬಾ ಚೆನ್ನಾಗಿ ಬಂದಿದೆ, ಈ ಚಿತ್ರಕ್ಕೆ ಸಲ್ಮಾನ್‍ಖಾನ್ ಅವರು ಕನ್ನಡದಲ್ಲೇ ಡಬ್ಬಿಂಗ್ ಮಾಡಿರುವುದು ಕೂಡ ಚಿತ್ರದ ಪ್ಲಸ್‍ಪಾಯಿಂಟ್ ಆಗಿದೆ ಎಂದು ಹೇಳಿದರು.

ನಿರ್ದೇಶಕ ಪ್ರಭುದೇವಾ ಮಾತನಾಡಿ, ಸುದೀಪ್ ಅವರು ನಮ್ಮ ನಿರೀಕ್ಷೆಗೂ ಮೀರಿ ನಟಿಸಿದ್ದಾರೆ, ಅವರು ನಟನೆಯಲ್ಲಿ ಇಟ್ಟುಕೊಂಡಿರುವ ಕಲಾತ್ಮಕತೆಯನ್ನು ಆರು ವರ್ಷದಿಂದ 60 ವರ್ಷದವರೆಗೂ ನೋಡಬಹುದು ಎಂದು ಕೊಂಡಾಡಿದರು. ನೀವೇಕೇ ಸುದೀಪ್ ಅವರನ್ನು ಹಾಕಿಕೊಂಡು ಕನ್ನಡದಲ್ಲೇ ಒಂದು ಚಿತ್ರವನ್ನು ನಿರ್ದೇಶಿಸಬಾರದು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಕಾಲ ಕೂಡಿ ಬಂದು ಸುದೀಪ್ ಅವರು ಡೇಟ್ಸ್ ಕೊಟ್ಟರೆ ಮಾಡುತ್ತೇನೆ. ಈ ಚಿತ್ರಕ್ಕೆ ನಾನೇ ನೃತ್ಯ ನಿರ್ದೇಶನ ಮಾಡಿದ್ದೇನೆ ಎಂದು ಹೇಳಿದರು.

ಮತ್ತೆ ಮೈಕ್ ಅನ್ನು ಕೈಗೆತ್ತಿಕೊಂಡ ಸಲ್ಮಾನ್‍ಖಾನ್, ಪ್ರಭುದೇವಾ ಅವರು ಪ್ರಬುದ್ಧ ಡ್ಯಾನ್ಸರ್ ಆಗಿರುವುದರಿಂದ ನೃತ್ಯ ಮಾಡಲು ತುಂಬಾ ಕಷ್ಟವಾಗಿತ್ತು, ಇಡೀ ದೇಹವನ್ನೇ ದಂಡಿಸಬೇಕಾಯಿತು. ಆದರೂ ಕೂಡ ಒಂದು ಒಳ್ಳೆಯ ಅನುಭವ ನೀಡಿತು ಎಂದು ಹೇಳಿದರು.
ನೃತ್ಯ ಅನ್ನುವುದು ಹೀರೋಗೆ ಸೀಮಿತ, ಅದು ವಿಲನ್‍ಗೆ ಒಪ್ಪುವುದಿಲ್ಲ, ಆದರೂ ಪ್ರಭುದೇವ ಅವರು ನನ್ನಿಂದಲೂ ನೃತ್ಯ ಮಾಡಿಸಿದರು ಎಂದು ಸುದೀಪ್ ಅವರು ಹೇಳಿದರು.

ನನಗೆ ಬೆಂಗಳೂರು ಹೊಸದೇನಲ್ಲ ನಾನು ನಟಿಸಿದ್ದ ಚಲ್‍ಮೇರೆಭಾಯ್ ಚಿತ್ರದ ಚಿತ್ರೀಕರಣವನ್ನು ಇಲ್ಲೇ ಮಾಡಿದ್ದೇವೆ ಅಲ್ಲದೆ ಊಟಿಗೆ ಹೋಗುವಾಗ ಬೆಂಗಳೂರಿಗೂ ಬಂದಿದ್ದೇನೆ, ಅಲ್ಲದೆ ಕೆಲವು ಶೋಸ್‍ಗಳನ್ನು ಕೂಡ ಕೊಟ್ಟಿದ್ದೇನೆ, ಎಂದು ಹೇಳಿದರು.

ನನ್ನ ನೈಜತೆಯನ್ನು ಅರ್ಥ ಮಾಡಿಕೊಳ್ಳಲು ದಭಾಂಗ್ ಸಿನಿಮಾಗಳು ತುಂಬಾ ನೆರವಾಗಿವೆ. ನನ್ನ ಹಾಗೂ ಸಲ್ಮಾನ್‍ಖಾನ್ ನಡುವೆ ಪ್ರೊಷನಲ್ ಸಂಬಂಧ ಮಾತ್ರ ಇಲ್ಲ. ಅದನ್ನೂ ಮೀರಿದ ಆತ್ಮೀಯತೆ ಇದೆ, ನಾನು ನಟಿಯಾಗುವುದಕ್ಕೆ ಮುಂಚಿನಿಂದಲೂ ನಾನು ಅವರನ್ನು ಬಲ್ಲೆ. ಅಲ್ಲದೆ 9 ವರ್ಷಗಳ ನಂತರ ಬೆಂಗಳೂರಿಗೆ ಬಂದಿದ್ದಕ್ಕೆ ಸಂತಸವಾಗುತ್ತಿದೆ, ನನಗೆ ಇಲ್ಲೂ ಅಭಿಮಾನಿಗಳಿದ್ದಾರೆ, ಒಂದು ಉತ್ತಮ ಟೀಂನೊಂದಿಗೆ ಕೆಲಸ ಮಾಡಿದ ತೃಪ್ತಿ ಇದೆ ಎಂದು ನಾಯಕಿ ಸೋನಾಕ್ಷಿ ಸಿನ್ಹಾ ಹೇಳಿದರು.

ಸಲ್ಮಾನ್ ಹಾಗೂ ಸುದೀಪ್ ಅವರು ನಟಿಸಿರುವ ದಭಾಂಗ್ 3 ಚಿತ್ರವೂ ಹಿಂದಿನ ದಭಾಂಗ್ ಚಿತ್ರಗಳು ಬಾಕ್ಸ್‍ಆಫೀಸ್ ಅನ್ನು ಲೂಟಿ ಹೊಡೆದಂತೆ ಈ ಚಿತ್ರವು ಪ್ರೇಕ್ಷಕರಿಗೆ ಫುಲ್ ಎಂಟರ್‍ಟೈನ್‍ಮೆಂಟ್ ಕೊಟ್ಟು ಹಣದ ಸುರಿಮಳೆಯನ್ನೇ ಸುರಿಸುವಂತಾಗಲಿ.

Related posts