ಕ್ರಿಕೆಟ್ ಬೆಟ್ಟಿಂಗ್‍ನ ಬದುಕ, ಬವಣೆ ಕ್ರಿಟಿಕಲ್ ಕೀರ್ತನೆಗಳು ಚಿತ್ರ ವಿಮರ್ಶೆ- ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಕ್ರಿಟಿಕಲ್ ಕೀರ್ತನೆಗಳು
ನಿರ್ದೇಶಕ : ಕುಮಾರ್
ನಿರ್ಮಾಪಕ : ಕುಮಾರ್
ಸಂಗೀತ : ವೀರ್ ಸಮರ್ಥ್
ಛಾಯಾಗ್ರಹಣ : ಶಿವಸೇನಾ ಹಾಗೂ ರಾಜ ಶಿವಶಂಕರ್
ತಾರಾಗಣ : ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ , ಅರ್ಪೂವ , ತರಂಗ ವಿಶ್ವ , ಅರುಣಾ ಬಾಲರಾಜ್ , ಅಪೂರ್ವ ಭಾರದ್ವಾಜ್ , ಮಾ॥ ಮಹೀಂದ್ರ , ಮಾ॥ ಪುಟ್ಟರಾಜು, ಯಶಸ್ ಅಭಿ, ದೀಪ , ಗುರುರಾಜ್, ಯಶ್ ಶೆಟ್ಟಿ , ಧರ್ಮ ಹಾಗೂ ಮುಂತಾದವರು…
ಪ್ರತಿಯೊಬ್ಬರಿಗೂ ದುಡ್ಡಿನ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಅದು ಎಷ್ಟರಮಟ್ಟಿಗೆ ಅನ್ನುವುದು ಬಹಳ ಮುಖ್ಯ. ಬದುಕಿಗಾಗಿ ದುಡ್ಡು ಮುಖ್ಯವೇ ಹೊರತು… ದುಡ್ಡಿಗಾಗಿ ಬದುಕುವುದು ಮುಖ್ಯ ಅಲ್ಲ ಎನ್ನುವುದನ್ನು ಅರಿಯುವುದು ಬಹಳ ಅವಶ್ಯಕ. ವೇಗವಾಗಿ ಹಣ ಸಂಪಾದಿಸುವ ಹಾದಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಅದರಲ್ಲಿ ಪ್ರಮುಖವಾಗಿ ಕಾಣುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಬಹುತೇಕ ಹಿರಿಯರು , ಕಿರಿಯರು ಹಣವನ್ನು ಹಾಕಿ ಒಂದಕ್ಕೆ ಎರಡರಷ್ಟು ಸಂಪಾದನೆ ಮಾಡುವ ಆಸೆ ಪಡುತ್ತಾರೆ.ಇಂತಹದೇ ಕಥಾನಕದೊಂದಿಗೆ 4 ಭಾಗದ ಜನರ ಕಥೆಯನ್ನ ಆಯ್ಕೆ ಮಾಡಿಕೊಂಡು ಬೆಟ್ಟಿಂಗ್ ಗೆ ಮುಗಿಬಿದ್ದವರ ಬದುಕು ಬವಣೆ ಯಾವ ರೀತಿ ಸಾಗುತ್ತದೆ ಎಂಬ ಸೂಕ್ಷ್ಮ ವಿಚಾರವನ್ನು ಎಳೆ ಎಳೆಯಾಗಿ ತೆರೆದಿಟ್ಟರು ಚಿತ್ರವೇ “ಕ್ರಿಟಿಕಲ್ ಕೀರ್ತನೆಗಳು”
ಚಿತ್ರದ ಕಥೆ ತೆರೆದುಕೊಳ್ಳುವುದೇ ಕೋರ್ಟ್ ಆವರಣದಲ್ಲಿ. ಲಾಯರ್ ಕರಿಯಪ್ಪ (ತಬಲಾ ನಾಣಿ) ಜೂಜು ಎಷ್ಟು ಮಾರಕ ಎಂಬ ಸತ್ಯವನ್ನು ಜಡ್ಜ್ ಎದುರು (ಸುಚೇಂದ್ರ ಪ್ರಸಾದ್) ಹೇಳಲು ಮುಂದಾಗುತ್ತಾನೆ. ತನ್ನ ಮಡದಿ (ಅಪೂರ್ವ) ಕೂಡ ಬೆಟ್ಟಿಂಗ್ ನಲ್ಲಿ ಹಣ ಸಂಪಾದನೆ ಮಾಡಿದ ವಿಡಿಯೋವನ್ನು ಕೂಡ ತೋರುವ ಲಾಯರ್ ಗೆ ಜಡ್ಜ್ ಸೂಕ್ತ ಪುರಾವೆ ಇರುವ ಮಾಹಿತಿ ಇದ್ದರೆ ನೀಡಿ , ವಿನಾಕಾರಣ ಕೋರ್ಟ್ ಸಮಯ ಹಾಳು ಮಾಡಬೇಡಿ ಎಂದು ಗದರಿದಾಗ, ಲಾಯರ್ ಕರಿಯಪ್ಪ ಮಂಡ್ಯ , ಬೆಳಗಾಂ , ಬೆಂಗಳೂರು ಹಾಗೂ ಮಂಗಳೂರು ಭಾಗಗಳಲ್ಲಿ ವಾಸವಿದ್ದ ಕುಟುಂಬಗಳ ಬೆಟ್ಟಿಂಗ್ ಕಥಾನಕದ ಎಳೆಯನ್ನು ತೆರೆದಿಡುತ್ತಾನೆ.
ಕರಾವಳಿ ಪ್ರದೇಶದ ಯುವಕನೊಬ್ಬ (ಯಶಸ್ ಅಭಿ) ಹಣದ ವ್ಯವಹಾರ ಮಾಡುವ ವ್ಯಕ್ತಿಯ ಜೊತೆ ಕೆಲಸ ಮಾಡುತ್ತಾ ವಸೂಲಾತಿ ಕಾರ್ಯದಲ್ಲಿ ನಿರತನಾಗಿದ್ದು, ಜೊತೆಗೆ ತನ್ನದೊಂದು ಮುದ್ದಾದ ಪ್ರೇಮ ಪಯಣ.ಇಷ್ಟದ ಗೆಳತಿ (ದೀಪ) ಳನ್ನು ಮದುವೆಯಾಗಲು ಬಯಸುವ ಯುವಕ. ಮಧ್ಯಮ೬ ವರ್ಗದಿoದ ಹೊರಬಂದು ವೇಗವಾಗಿ ಹಣ ಸಂಪಾದನೆ ಮಾಡಲು ಕ್ರಿಕೆಟ್ ಬೆಟ್ಟಿಂಗ್ ಗೆ ದಾರಿ ಹುಡುಕಿಕೋಳುತ್ತಾನೆ.
ಬೆಂಗಳೂರಿನಂತಹ ಮಾಯಾನಗರಿಯಲ್ಲಿ ಗಂಡ , ಹೆಂಡತಿ ಮುದ್ದಾದ ಮಗು ಸುಂದರ ಕುಟುಂಬದೊಂದಿಗೆ ಉತ್ತಮ ಕೆಲಸದ ಬದುಕು ನಡೆಸುವ (ರಾಜೇಶ್ ನಟರಂಗ) ವ್ಯಕ್ತಿ. ತನ್ನ ಹೆಂಡತಿ (ಅಪೂರ್ವ ಭರದ್ವಾಜ್)ಬಯಸಿದ್ದನ್ನು ಕೊಡಿಸುವ ತವಕ , ಮಗುವನ್ನು ಅದೃಷ್ಟ ದೇವತೆ ಎಂದು ಮುದ್ದಾದ ತಂದೆ. ಕೆಲಸದಲ್ಲೂಕೂಡ ಲವಲವಿಕೆಯ ಬದುಕು. ಇದರ ನಡುವೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಆತನನ್ನ ಸೇಳೆಯುದೆ. ಒಂದರ ಹಿಂದೆ ಒಂದು ಗೆಲುವಿನ ಹಾದಿಯಲ್ಲಿ ಹಣ ಸಂಪಾದನೆ ಮಾಡುವ ವ್ಯಕ್ತಿ. ಸೋಲನ್ನು ಕಂಡಾಗ ಬದುಕಿನ ಪರಿಸ್ಥಿತಿ.
ಬೆಳಗಾವಿಯಲ್ಲಿ ತನ್ನದೇ ಆದ ಪ್ರಪಂಚದೊಂದಿಗೆ ಆಟೋ ಓಡಿಸುತ್ತಾ , ಶಂಕರ್ ನಾಗ್ ಅಭಿಮಾನಿಯಾಗಿ ಜನರಿಗೆ ಸ್ಪಂದಿಸುತ್ತಾ ಪ್ರೀತಿ , ಸ್ನೇಹದ ಹಾದಿಯಲ್ಲಿ ಸಾಗುವ ವ್ಯಕ್ತಿ (ವಿಶ್ವ ತರಂಗ) ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ಮುಳುಗಿ ಕ್ರೀಡಾಪಟುಗಳು ಹಾಗೂ ತಂಡಗಳನ್ನೇ ದೇವರಾಗಿ ಪೋಷಿಸುತ್ತಾ , ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನೊಂದಿಗೆ ಇರುವ ಆಟೋವನ್ನು ಕೂಡ ಬಡ್ಡಿ ವ್ಯಾಪಾರಿ (ಧರ್ಮ) ಬಳಿ ಅಡವಿಟ್ಟು ಹಣ ಸಂಪಾದನೆ ಮಾಡಲು ಮುಂದಾಗುತ್ತಾನೆ.
ಮಂಡ್ಯದ ಹಳ್ಳಿಯೊಂದರಲ್ಲಿ ಗಂಡನಿಲ್ಲದೆ ತನ್ನ ಮಗನಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ದೊಡ್ಡ ಮಟ್ಟದ ವ್ಯಕ್ತಿ ಮಾಡುವ ತವಕ ಹೊಂದಿರುವ ತಾಯಿ (ಅರುಣಾ ಬಾಲರಾಜ್) ಆಲೆಮನೆ ಸೇರಿದಂತೆ ಹಲವೆಡೆ ಕೆಲಸ ಮಾಡಿ ಹಣವನ್ನು ಕೂಡಿಟ್ಟು ಮನೆ ಕಟ್ಟಲು ನಿರ್ಧರಿಸುತ್ತಾಳೆ. ಇದರ ನಡುವೆ ತನ್ನ ಮಗ (ಪುಟ್ಟರಾಜು) ತನ್ನ ಶಾಲಾ ಗೆಳೆಯನ (ಮಹೇಂದ್ರ) ಮಾತು ಕೇಳಿ ಕ್ರಿಕೆಟ್ ಬೆಟ್ಟಿಂಗ್ ಹಣವನ್ನು ತೊಡಗಿಸಿ ಒಂದಕ್ಕೆ ಎರಡರಷ್ಟು ಸಂಪಾದನೆ ಮಾಡಿ ತಾಯಿಗೆ ಸಹಾಯ ಮಾಡಲು ಆಲೋಚನೆ ಮಾಡುತ್ತಾನೆ. ತಾಯಿಗೆ ಕಾಣದೆ ಮಗ ಹಾಗೂ ಗೆಳೆಯ ಕ್ರಿಕೆಟ್ ದಂಧೆಕೋರ (ಯಶ್ ಶೆಟ್ಟಿ)ಗೆ ಹಣ ನೀಡಿ ಸಿಕ್ಕಿಕೊಳ್ಳುತ್ತಾರೆ.
ಹೀಗೆ ಸಾಗುವ ನಾಲ್ವರ ಕಥೆಯೂ ಹಲವು ತಿರುವುಗಳನ್ನು ಪಡೆದು ಪಡೆದುಕೊಳ್ಳುತ್ತದೆ. ಕೊನೆಗೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಮಂಗಳೂರಿನ ಯುವಕ ಪ್ರೀತಿಯ ಜತೆ ಹಣ ಪಡೆಯುತ್ತಾನಾ… ಬೆಂಗಳೂರಿನ ದಂಪತಿ ಬದುಕು ಏನಾಗತ್ತೆ….
ಬೆಳಗಾವಿಯ ಆಟೋ ಚಾಲಕನ ಸ್ಥಿತಿ ಗತಿ ಏನು…
ತಾಯಿ ಮಗನ ಜೀವನ ಏನಾಗತ್ತೆ…
ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಕ್ರಿಟಿಕಲ್ ಕೀರ್ತನೆಗಳು ಮೂಲಕ ಕೋರ್ಟ್ ಆವರಣದಲ್ಲಿ ಬಹಳ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ನಿವೆಲ್ಲರೂ ಒಮ್ಮೆ ಈ ಚಿತ್ರವನ್ನ ತೆರೆಮೇಲೆ ನೋಡಬೇಕು.
ಸೂಕ್ಷ್ಮ ವಿಚಾರವನ್ನು ಎಲ್ಲರಿಗೂ ಮನಮುಟ್ಟುವಂತೆ ತೆರೆದಿಡುವ ಪ್ರಯತ್ನವನ್ನು ನಿರ್ದೇಶಕ ಹಾಗೂ ನಿರ್ಮಾಪಕ ಕುಮಾರ್ ಮಾಡಿರುವ ಪ್ರಯತ್ನ ಮೆಚ್ಚಲೇಬೇಕು. ವೇಗವಾಗಿ ಹಣ ಸಂಪಾದನೆ ಮಾಡುವ ಹಾದಿಯಲ್ಲಿ ಸಾಗುವ ಜನರು ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಿಲುಕಿ ಎಷ್ಟರಮಟ್ಟಿಗೆ ಸಂಕಷ್ಟ, ತೊಂದರೆಯನ್ನು ಅನುಭವಿಸುತ್ತಾರೆ ಎಂಬ ವಿಚಾರವನ್ನು ತೆರೆದಿಟ್ಟಿದ್ದಾರೆ. ಚಿತ್ರದ ಓಟ ಮತ್ತಷ್ಟು ವೇಗವಾಗಿ ತರಬಹುದಿತ್ತು , ಸಂಭಾಷಣೆ ಹಾಗೂ ಹಾಡುಗಳು ಮತ್ತಷ್ಟು ಸೆಳೆಯುವಂತೆ. ಒಟ್ಟಾರೆ ಮೂಲ ವಿಷಯ ಬಹಳ ಸೂಕ್ಷ್ಮವಾಗಿದ್ದು , ಸರ್ಕಾರವು ಈ ವಿಚಾರದತ್ತ ಗಮನ ಹರಿಸುವಂತೆ ಮಾಡಿದ್ದಾರೆ.
ಈ ಚಿತ್ರದ ಸಂಗೀತ ನೀಡಿರುವ ವೀರ್ ಸಮರ್ಥ್ ಕೆಲಸ ಮತ್ತಷ್ಟು ಉತ್ತಮವಾಗಿ ಬರಬಹುದಿತ್ತು. ಇನ್ನು ಛಾಯಾಗ್ರಾಹಕ ಶಿವಸೇನಾ ಹಾಗೂ ರಾಜ ಶಿವಶಂಕರ್ ಕೈಚಳಕ ಗಮನಾರ್ಹವಾಗಿದೆ.
ಇನ್ನು ಈ ಚಿತ್ರದಲ್ಲಿ ಲಾಯರ್ ಪಾತ್ರ ಮಾಡಿರುವ ತಬಲಾ ನಾಣಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಸೂಕ್ಷ್ಮ ವಿಚಾರ ಕೋರ್ಟ್ ಆವರಣದಲ್ಲಿ ಹೇಳಿರುವ ರೀತಿ ಉತ್ತಮವಾಗಿದೆ. ಹಾಗೆಯೇ ಗಂಡ ಹೆಂಡತಿಯ ಸಂಬಂಧದ ಸೂಕ್ಷ್ಮತೆಯನ್ನು ನವಿರಾಗಿ ಹಾಸ್ಯದ ರೂಪದಲ್ಲಿ ತೆರೆದಿಟ್ಟಿದ್ದಾರೆ. ಚಿತ್ರದ ಇಂಟರ್ವಲ್ ಭಾಗಕ್ಕೆ ನಾಂದಿ ಹಾಡುವ ಹಾಸ್ಯ ಸನ್ನಿವೇಶ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇನ್ನು ಜಡ್ಜ್ ಆಗಿ ಸುಚೇಂದ್ರಪ್ರಸಾದ್ ಅದೇ ಗತ್ತು ಗೈರು ತೋರಿಸಿದ್ದಾರೆ. ಮಡದಿಯಾಗಿ ಅಪೂರ್ವ ಕೂಡ ಗಮನ ಸೆಳೆಯುತ್ತಾರೆ. ಇನ್ನೂ 4ಭಾಗಗಳಲ್ಲಿ ಬರುವ ರಾಜೇಶ್ ನಟರಂಗ , ಅರ್ಪೂವ ಭಾರದ್ವಾಜ್, ತರಂಗ ವಿಶ್ವ , ಅರುಣಾ ಬಾಲರಾಜ್ , ಮಾ॥ ಮಹೀಂದ್ರ , ಮಾ॥ ಪುಟ್ಟರಾಜು, ಯಶಸ್ ಅಭಿ, ದೀಪ ಸೇರಿದಂತೆ ಗುರುರಾಜ್ ಹೊಸಕೋಟೆ , ರಘು ಪಾಂಡೇಶ್ವರ್ , ದಿನೇಶ್ ಮಂಗಳೂರ್, ಯಶ್ ಶೆಟ್ಟಿ , ಧರ್ಮ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ. ಒಟ್ಟಾರೆ ಕುಟುಂಬ ಸಮೇತ ಎಲ್ಲರೂ ಕುಳಿತು ನೋಡಬೇಕಾದ ಚಿತ್ರ ಕ್ರಿಟಿಕಲ್ ಕೀರ್ತನೆಗಳು. ಎಲ್ಲರೂ ಒಮ್ಮೆ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡಿ.