Cinisuddi Fresh Cini News 

ಕ್ರಿಯೇಟಿವ್ ಕಂಪೋಸರ್ ಕಾರ್ತಿಕ್ ಸ್ಟುಡಿಯೋದಲ್ಲಿ ಸಿನಿಮಾ ಕೆಲಸ ಶುರು

ಕೊರೋನಾ ಹಾವಳಿಯಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಚಿತ್ರ ಚಟುವಟಿಕೆಯ ಕೆಲಸಗಳು ಆರಂಭವಾಗಿದೆ. ಆ ನಿಟ್ಟಿನಲ್ಲಿ ಯುವ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಸ್ಟುಡಿಯೋ ಈಗ ಬಹಳಷ್ಟು ಬ್ಯೂಸಿ ಆಗಿದ್ದು , ಪೋಸ್ಟ್ ಪ್ರೊಡಕ್ಷನ್ ಕೆಲಸಗಳಾದ ಡಬ್ಬಿಂಗ್, ರೀ- ರೆಕಾರ್ಡಿಂಗ್, ಮಿಕ್ಸಿಂಗ್, ಸಾಂಗ್ ರೆಕಾರ್ಡಿಂಗ್ ಸೇರಿದಂತೆ ಹಲವು ಕೆಲಸಗಳು ಚುರುಕುಗೊಂಡಿದೆ.

ಈಗಾಗಲೇ ಕಾರ್ತಿಕ್ ಸ್ಟುಡಿಯೋನಲ್ಲಿ ಲಾಕ್ ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಸಿಂಧೂರ, ಅಬ್ದುಲ್ಲಾ , ಘಾಟ್ ಸೆಕ್ಷನ್ , ಮ್ಯಾಗಿ , ಟೆಡ್ಡಿ ಬೇರ್, ದೊಡ್ಡಮನ್ಸ , ಪ್ರೀತಿ ಜೆಟ್ಟಿ , ಮರೆಯದೆ ಕ್ಷಮಿಸು ಚಿತ್ರಗಳು ಕೆಲಸ ನಡೆಯುತ್ತಿದ್ದು , ಇದರ ನಡುವೆ ರಿಯಲ್ ಎಸ್ಟೇಟ್ , ಅವಂತಿಕಾ , ಅಬ್ದುಲ್ಲಾ , ಹಾಗೂ ಮ್ಯಾಗಿ ಚಿತ್ರಗಳ ಡಿ.ಟಿ.ಎಸ್ , ಎಡಿಟಿಂಗ್ ಹಾಗೂ ಡಬ್ಬಿಂಗ್ ಕೆಲಸಗಳು ನಡೆಯುತ್ತಿದೆ.

ಸಿನಿಮಾ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಕಾರ್ತಿಕ್ ವೆಂಕಟೇಶ್ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾಶ್ರೀ ಹಾಗೂ ಸ್ವರ್ಣ ಶ್ರೀ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಸುಮಧುರ ಸಂಗೀತವನ್ನು ನೀಡುವುದರ ಜೊತೆಗೆ ಚಿತ್ರ ಸಾಹಿತಿ ಕೂಡ ಆಗಿದ್ದು , ಚಿತ್ರರಂಗದಲ್ಲಿ ನಿರ್ಮಾಪಕ , ನಿರ್ದೇಶಕರಾಗಿ , ಸ್ಟುಡಿಯೋವನ್ನು ನಡೆಸಿಕೊಂಡು ಬರುತ್ತಿರುವ ಬಹುತೇಕ ಯುವ ಪ್ರತಿಭೆಗಳಿಗೆ ಸಹಕಾರಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಬಿ.ಇ .ಗೋಲ್ಡ್ ಮೆಡಲಿಸ್ಟ್ ಆದಂತಹ ಕಾರ್ತಿಕ್ ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದಾರೆ. ಮೂಲತಃ ಬೆಂಗಳೂರಿನ ನಿವಾಸಿಯಾದ ಕಾರ್ತಿಕ್ ಶಾಲಾ ದಿನಗಳಲ್ಲಿ ರ್ಯಾಂಕ್ ಸ್ಟೂಡೆಂಟ್ ಆಗಿ ಗುರುತಿಸಿಕೊಂಡ ಇವರು ಎಸ್‍ಎಸ್‍ಎಲ್‍ಸಿಯಲ್ಲಿ 16ನೆ ರ್ಯಾಂಕ್ ಪಡೆದು, ಮುಂದೆ ಪಿಯೂಸಿ ಹಾಗೂ ಇಂಜಿನಿಯರಿಂಗ್‍ನ ಎಲ್ಲ ಸೆಮಿಸ್ಟ್ರಿನಲ್ಲೂ ಡಿಸ್ಟಿಂಕ್ಷನ್ ಪಡೆದವರು.

ಇಂಜಿನಿಯರಿಂಗ್ ವಿದ್ಯಾರ್ಥಿ ಆದ ಇವರು ಗೂಗಲ್ ಇಂಡಿಯಾ ಸಂಸ್ಥೆಯಡಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸವನ್ನು ಮಾಡುತ್ತಿದ್ದ ಅವರು ಸಂಗೀತ ಕ್ಷೇತ್ರದತ್ತ ತಮ್ಮ ಒಲವನ್ನು ತೋರಿಸಿದರು. 2004ರಲ್ಲಿ ಸಂಗೀತದ ಬಗ್ಗೆ ಆಸಕ್ತಿ ಹೊಂದಿ ಇಮ್ಯಾನುಯಲ್ ಬಾಲುವಿನೊಂದಿಗೆ ವೆಸ್ಟ್ರನ್ ಸಂಗೀತ ಹಾಗೂ ಶಾಮಾಲಾ ಜಿ.ಭಾವೆರವರೊಂದಿಗೆ ಹಿಂದೂಸ್ತಾನಿ ಸಂಗೀತವನ್ನು ಕಲಿತ ಈ ಪ್ರತಿಭೆ 2007ರಲ್ಲಿ ದೇಸಿ ದುಡ್ಡು ಎಂಬ ಆಲ್ಬಂ ಅನ್ನು ಮಾಡಿದವರು.

ನಂತರ ಕಾರ್ತಿಕ್‍ ಅಘೋರಿ ಎಂಬ ಚಿತ್ರಕ್ಕೆ ಸಂಗೀತ ನೀಡಿ ಚಿತ್ರರಂಗದಿಂದ ದೂರ ಸರಿದ್ದರು. ಸುಮಾರು ವರ್ಷಗಳ ನಂತರ 2015 ರಿಂದ ಮತ್ತೆ ಸಂಗೀತ ಕ್ಷೇತ್ರದ ಕಡೆಗೆ ಮನಸ್ಸು ವಾಲಿಸಿದ ಕಾರ್ತಿಕ್ ಓಜಸ್ ಚಿತ್ರದ ಮೂಲಕ ತಮ್ಮ ಸಂಗೀತದ ಪಯಣವನ್ನು ಆರಂಭಿಸಿದರು. ದರ್ಪಣ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ 21 ವಿಭಾಗಗಳಲ್ಲಿ ಕೆಲಸ ಮಾಡಿ ಗಿನ್ನೆಸ್ ರೆಕಾರ್ಡ್‍ಗೆ ಅರ್ಜಿಯನ್ನು ಕೂಡ ಕಳಿಸಿದ್ದಾರೆ.

ನಂತರ ಮೈಥಿಲಿ, ಫ್ಲವರ್ , ಪ್ರೇಮ ಸಾಯಿಸೇ, ಜಾಲಿ ಮರದ ಗುಲಾಬಿ, ಪರಿಧಿ, ಭಾಗ್ಯಶಾಲಿ, ದೇವರಿಗೊಂದು ಕಾಗದ, ಸೀತಮ್ಮ ಬಂದಳು ಸಿರಿಮಲ್ಲೆ ತೊಟ್ಟು, ಅಭಯಹಸ್ತ, ಮುಂದಿನ ಬದಲಾವಣೆ, ಅಮೃತಘಳಿಗೆ , ಮುಖ್ಯಮಂತ್ರಿ ಕಳದ್ನೊಪ್ಪೋ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಂಗೀತ ನೀಡಿದ್ದು ಇನ್ನು ಹುಲಿಹೈದ, ಒಲವ ಹಾದಿಯಲ್ಲಿ, ಮಧುರಂ ಮಿಲನಂ ಮೌನಂ, ಅಯ್ಯನಗುಡಿ, ಚೆಲುವಿನ ಚಂದಿರ, ಪಂಚಮುಖಿ, ರಿಯಲ್ ಎಸ್ಟೇಟ್ ಸೇರಿದಂತೆ ಇನ್ನು ಹಲವಾರು ಚಿತ್ರಗಳು ಬರಬೇಕಿದೆ. ವಿಶೇಷವೆಂದರೆ ಮಧುರಂ ಮಿಲನಂ ಮೌನಂ ಎಂಬ ವಿನೂತನ ಸಂಗೀತ ಪ್ರಯೋಗದ ಚಿತ್ರಕ್ಕೆ ಸಾರಥ್ಯ ವಹಿಸಿಕೊಂಡು ಸರಿಪ ಮೂರೇ ಸ್ವರದಲ್ಲಿ ಹಾಡೊಂದನ್ನು ಕಂಪೋಸ್ ಮಾಡಿರುವುದು ವಿಶೇಷವಾಗಿದೆ. ಇದಕ್ಕೆ ಯಾಹೋ ಪ್ರಿಯ ರಾಗ ಎಂದು ಕೂಡ ಕಾರ್ತಿಕ್ ನಾಮಕರಣ ಮಾಡಿದ್ದಾರೆ.

ಇಡೀ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಸರಿಪ ಸ್ವರವನ್ನು ಬಳಸಿ ಸಂಗೀತ ಮಾಡಿರುವುದು. ಈ ಒಂದು ಸಾಧನೆಯ ಹಾಡನ್ನು ಲಿಮ್ಕಾ , ಏಷ್ಯಾನ್ ಹಾಗೂ ಗಿನ್ನಿಸ್ ರೆಕಾರ್ಡ್‍ಗೆ ಕಳುಹಿಸಲು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕ ಇಳಯರಾಜಾ ಅವರು ಸರಿಗ ಸ್ವರವನ್ನು ಬಳಸಿ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ್ದರು. ಆದರೆ ಸಿನಿಮಾಗೆ ಎಂದು ಸಂಪೂರ್ಣವಾಗಿ ಮಾಡಿರುವುದು ಈ ಮಧುರ ಮಿಲನಂ ಮೌನಂ ಚಿತ್ರದಲ್ಲಿ ಮಾತ್ರ. ಈ ಹಾಡನ್ನು ಅನುರಾಧಾಭಟ್ ಹಾಡಿದ್ದಾರೆ.

ಇವರ ಮಹದಾಸೆ ಇಡೀ ವಿಶ್ವವೇ ತಿರುಗಿ ನೋಡುವಂತಹ ಚಿತ್ರವನ್ನು ಮಾಡುವ ಬಯಕೆಯಿಂದ ಹೈಬ್ರೀಡ್ ಎಂಬ ಚಿತ್ರವನ್ನು ಮಾಡಲು ಮುಂದಾಗಿದ್ದು, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ನಿರ್ಮಿಸುವ ತವಕವನ್ನು ಹೊಂದಿದ್ದಾರೆ. ಈಗಾಗಲೇ ಈ ಚಿತ್ರದ ಬಹುತೇಕ ದೃಶ್ಯಗಳನ್ನು ಚಿತ್ರೀಕರಣ ಕೂಡ ಮಾಡಿದ್ದು, ಸುಮಾರು 1 ಗಂಟೆಗೂ ಅಧಿಕ ಕಾಲ ಗ್ರಾಫಿಕ್ ಈ ಚಿತ್ರದಲ್ಲಿ ಕಾಣಸಿಗಲಿದೆಯಂತೆ.

ವಿಶೇಷವೆಂದರೆ ಈ ಚಿತ್ರದಲ್ಲಿ ಅನಿಮಾಟ್ರಾನಿಕ್ ಹಾಗೂ ಪ್ರೀ ವಿಜುಲೈಷನ್‍ನ ಗ್ರಾಫಿಕ್ ಮೂಲಕ ಹೊಸ ಆವಿಷ್ಕಾರವನ್ನು ಮಾಡಲಿದ್ದು, ಚಿತ್ರೀಕರಣಕ್ಕೆ ಹೊರಡುವ ಮುಂಚೆಯೇ ಗ್ರಾಫಿಕ್‍ನಲ್ಲೇ ಚಿತ್ರವನ್ನು ಸಿದ್ಧಪಡಿಸಿ 2ಡಿ ಹಾಗೂ 3ಡಿಯಲ್ಲಿ ನೋಡಿ ಏನೆಲ್ಲಾ ಬದಲಾವಣೆ ಮಾಡಬೇಕೋ ಆ ಸಾಮಥ್ರ್ಯ ಈ ಒಂದು ತಂತ್ರಜ್ಞಾನಕ್ಕೆ ಇದೆಯಂತೆ.

ಈ ಹೈಬ್ರೀಡ್ ಮೂಲಕ ರಾಜಕೀಯ ಭ್ರಷ್ಟಾಚಾರದ ಪ್ರಾಣಿಗಳನ್ನು ಮಟ್ಟ ಹಾಕಲು ವಿಶೇಷವಾಗಿ ಹೈಬ್ರೀಡ್ ವೈಜ್ಞಾನಿಕ ಪ್ರಾಣಿಯನ್ನು ಹುಟ್ಟು ಹಾಕಿ ಒಂದು ತಂಡವನ್ನು ರಚಿಸಿ ಆ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ತಂತ್ರವನ್ನು ಈ ಚಿತ್ರದಲ್ಲಿ ಮಾಡಲಿದ್ದು, ಇದು ಚಿತ್ರರಂಗದ ಇತಿಹಾಸದಲ್ಲೇ ಒಂದು ವಿಭಿನ್ನ ಪ್ರಯತ್ನವಾಗಲಿದೆ ಎಂಬ ಆಸೆ ನಿರ್ದೇಶಕರು ಹೊಂದಿದ್ದಾರಂತೆ.

ಈ ಚಿತ್ರದಲ್ಲಿ ಫೈಯಜ್‍ಖಾನ್ ನಾಯಕನಾಗಿ ಲಗಾನ್ ಖ್ಯಾತಿಯ ಗ್ರೇಸಿಸಿಂಗ್ ನಾಯಕಿಯಾಗುವ ಸಾಧ್ಯತೆ ಇದೆಯಂತೆ.
ಬಹಳಷ್ಟು ಕನಸುಗಳನ್ನು ಹೊತ್ತುಕೊಂಡಿರುವ ಈ ಯುವ ಪ್ರತಿಭೆ ನಿರ್ದೇಶನದೊಂದಿಗೆ ಸಂಗೀತವನ್ನು ಕೂಡ ತಮ್ಮ ಉಸಿರನ್ನಾಗಿಸಿಕೊಂಡು ಬದುಕುತ್ತಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಒಂದು ಛಾಪಿನ ಮೂಡಿಸಲು ಸ್ಟುಡಿಯೋವನ್ನು ನಿರ್ಮಿಸಿಕೊಂಡು ಪ್ರಿ- ಪ್ರೊಡಕ್ಷನ್, ಪೋಸ್ಟ್- ಪ್ರೊಡಕ್ಷನ್ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದು ಸ್ಕ್ರಿಪ್ಟ್‍ನಿಂದ ಚಿತ್ರ ಬಿಡುಗಡೆಯಾಗುವವರೆಗೂ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುವ ಮೂಲ ಉದ್ದೇಶವನ್ನು ಇವರು ಹೊಂದಿದ್ದಾರಂತೆ.

ಸಂಗೀತ ನಿರ್ದೇಶಕ ಕಾರ್ತಿಕ್ ಬರುವಂತಹ ಬಹುತೇಕ ಯುವ ನಿರ್ದೇಶಕ, ನಿರ್ಮಾಪಕರಿಗೆ ಸಾಥ್ ನೀಡುತ್ತ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಹಾಗೂ ವಿಭಿನ್ನ ಶೈಲಿಯ ಚಿತ್ರಗಳನ್ನು ನೀಡುವ ಹೆಬ್ಬಯಕೆಯನ್ನು ಹೊಂದಿದ್ದಾರೆ. ಬಹಳಷ್ಟು ಆಸಕ್ತಿ ಉಳ್ಳ ನಿರ್ಮಾಪಕ , ನಿರ್ದೇಶಕರಿಗೆ ಕೈ ಜೋಡಿಸಿರುವ ಕಾರ್ತಿಕ್ ವೆಂಕಟೇಶ್ ಈ ಲಾಕ್ ಡೌನ್ ಸಮಯದಲ್ಲೂ ಕೂಡ ಅವರ ಬೆನ್ನಿಗೆ ನಿಂತು ಚಿತ್ರ ಚಟುವಟಿಕೆ ಕೆಲಸದಲ್ಲಿ ನಿರತರಾಗಿದ್ದಾರೆ.ಇವರ ಈ ಸ್ನೇಹ ಮನೋಭಾವದ ಕೆಲಸ ನಿರಂತರವಾಗಿ ಸಾಗಲಿ.

Related posts