‘ಗಂಧದ ಗುಡಿ’ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತೇ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಎಂದರೆ ಅಲ್ಲಿ ಒಂದು ಕುತೂಹಲವಿರುತ್ತದೆ. ದಚ್ಚು ಅಭಿಮಾನಿಗಳಿಗಂತೂ ಎಲ್ಲಿಲ್ಲದ ಸಡಗರ, ಕಾತುರವಿರುತ್ತೆ.
ಗಾಂಧಿನಗರದ ಮಂದಿಗೆ ಹೇಗಿದೆಯೋ ಎಂಬ ಕುತೂಹಲ. ದರ್ಶನ್ ಅಭಿನಯದ ಹೊಸ ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಗಾಂಧಿ ನಗರದಲ್ಲಿ ಹೊಸ ಉತ್ಸಾಹವೊಂದು ಮೂಡುತ್ತದೆ.
ಹಾಗಾಗಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ದರ್ಶನ್ ಸಿನಿಮಾ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಇನ್ನು ದರ್ಶನ್ ಯಾವುದಾದರೂ ಹೊಸ ಕತೆ ಕೇಳಿ ಒಪ್ಪಿದ್ದಾರೆ ಎಂದರೆ ಸಾಕು, ಅಲ್ಲಿಂದಲೇ ಆ ಸಿನಿಮಾದ ಬಗ್ಗೆ ಲೆಕ್ಕಾಚಾರ ಶುರುವಾಗುತ್ತದೆ. ಈಗಲೂ ದರ್ಶನ್ ಹೊಸ ಚಿತ್ರದ ಕುರಿತು ಹಾಗೆಯೇ ಆಗಿದೆ.
ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಇತ್ತೀಚೆಗೆ ನಟ ದರ್ಶನ್ ಅವರಿಗಾಗಿ ಮುಂದೆ ಗಂಧದ ಗುಡಿ ಮಾದರಿಯ ಕಥೆಯಿರುವ ಬಿಗ್ ಬಜೆಟ್ ಚಿತ್ರವೊಂದನ್ನು ಮಾಡುವ ಪ್ಲಾನ್ ಇರುವುದಾಗಿ ಹೇಳಿಕೊಂಡಿದ್ದರು.
ಆ ವಿಷಯ ದರ್ಶನ್ ಅವರಿಗೆ ಸಿಂಗ್ ಬಾಬು ಆಗಲೇ ಒಂದು ಲೈನ್ ಕತೆಯನ್ನು ಹೇಳಿದ್ದಾರಂತೆ, ದರ್ಶನ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ ಎಂದು ಎಲ್ಲೆಡೆ ದೊಡ್ಡದಾಗಿ ಸುದ್ದಿಯಾಗಿತ್ತು. ಈ ವಿಷಯ ಬಹಿರಂಗವಾಗಿದ್ದ ತಡ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಹೈಪ್ ಶುರುವಾಗಿಬಿಟ್ಟಿತ್ತು.
ಆದರೆ ಇದಕ್ಕೆ ತಡೆ ಒಡ್ಡುವಂತೆ ಮಾತನ್ನಾಡಿರುವ ನಟ ದರ್ಶನ್, ಸದ್ಯಕ್ಕೆ ಆ ಸಿನಿಮಾದ ಕುರಿತು ಯಾವುದೇ ಮಾತು ಬೇಡ ಎಂದು ಹೇಳಿದ್ದಾÁರೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದರ್ಶನ್, ಗಂಧದ ಗುಡಿ ಸಿನಿಮಾದ ಬಗ್ಗೆ ಈಗ ಮಾತು ಬೇಡ.
ಮುಂದೆ ಆ ಚಿತ್ರದ ಬಗ್ಗೆ ಮಾತನಾಡೋಣ, ಈಗ ಬೇಡ ಎಂದು ಹೇಳಿದ್ದಾರೆ. ಸದ್ಯಕ್ಕೆ ಮೂರು ಸಿನಿಮಾಗಳು ನನ್ನ ಕೈಯಲ್ಲಿವೆ, ಮೊದಲು ಈಗಿರುವ ಮೂರೂ ಸಿನಿಮಾಗಳನ್ನು ಮುಗಿಸಿಕೊಡಬೇಕು, ನಂತರ ಪರಿಸ್ಥಿತಿ ಹೇಗಿರುತ್ತದೆಯೋ ನೋಡಿಕೊಂಡು ಮುಂದುವರಿಯಬೇಕು.
ಈಗಲೇ ಆ ಸಿನಿಮಾದ ಬಗ್ಗೆ ಮಾತನಾಡುವುದು ಬೇಡ ಎಂದು ಕೂಲಾಗಿ ಹೇಳಿದ್ದಾರೆ. ಸದ್ಯಕ್ಕೆ ರಾಜವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣವನ್ನು ಮುಗಿಸಬೇಕು. ಅದಕ್ಕೆ ಎಷ್ಟು ದಿನ ಬೇಕಾಗಬಹುದು ಎನ್ನುವುದು ಸ್ಪಷ್ಟವಿಲ್ಲ, ಆ ನಂತರದಲ್ಲಿ ಮಿಲನ ಪ್ರಕಾಶ್ ಅವರಿಗೆ ಡೇಟ್ಸ್ ನೀಡಿದ್ದೇನೆ.
ಅವರ ಚಿತ್ರವನ್ನು ಮುಗಿಸಿದ ನಂತರ ಯಜಮಾನದ ಶೈಲಜಾನಾಗ್ ಅವರ ನಿರ್ಮಾಣದ ಚಿತ್ರವನ್ನು ಮಾಡಿಕೊಡಬೇಕಿದೆ. ಅದಾದ ನಂತರವಷ್ಟೆ ರಾಜೇಂದ್ರ ಸಿಂಗ್ ಬಾಬು ಅವರ ಸಿನಿಮಾವನ್ನು ಕೈಗೆತ್ತಿಕೊಳ್ಳಬೇಕು ಎಂದು ದರ್ಶನ್ ವಿವರವಾಗಿ ಹೇಳಿದ್ದಾರೆ.
ಈ ಹಿಂದೆ ನಾಗರಹೊಳೆ, ಸಿಂಹದ ಮರಿ ಸೈನ್ಯದಂಥಾ ಕಾಡಿನ ಹಿನ್ನೆಲೆಯ ರೋಚಕ ಕಥೆಗಳಿರುವ ಸಿನಿಮಾಗಳನ್ನು ನಿರ್ದೇಶಿಸಿರುವ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಗಂಧದ ಗುಡಿ ಚಿತ್ರದ ಮಾದರಿಯಲ್ಲಿಯೇ ‘ಅಂತರರಾಷ್ಟ್ರೀಯ ಗಂಧದ ಗುಡಿ’ ಎಂಬ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡುವ ಪ್ಲಾನ್ ಇದೆ,
ಆಫ್ರಿಕಾ, ಹಾಂಗ್ಕಾಂಗ್, ಲಂಡನ್ ಮುಂತಾದ ದೇಶಗಳ ನಡುವೆ ಈ ಚಿತ್ರದ ಕತೆ ಸಾಗಲಿದ್ದು ಈ ಚಿತ್ರದಲ್ಲಿ ನಟ ದರ್ಶನ್ ಒಬ್ಬ ಐ.ಎಫ್.ಎಸ್. ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.