Cini Reviews Cinisuddi Fresh Cini News 

ದುರಾಸೆ ಬದುಕಿಗೆ ದಾರಿ “ಬೈ ಪಾಸ್ ರೋಡ್” (ಚಿತ್ರವಿಮರ್ಶೆ : ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ಬೈ ಪಾಸ್ ರೋಡ್ ನಿರ್ದೇಶಕ : ಎಸ್.ಬಿ. ಶ್ರೀನಿವಾಸ್
ನಿರ್ಮಾಪಕರು :ಭರತ್ .ರಾಜ್.ಎಂ, ಬಿ.ಎನ್. ಮಹೇಶ್
ಸಂಗೀತ : ವಿಜಯ ಕೃಷ್ಣ ಛಾಯಾಗ್ರಹಣ : ನಿರಂಜನ್ ಬಾಬು
ತಾರಾಗಣ : ಭರತ್ ಕುಮಾರ್, ನೇಹಾ ಸಕ್ಸೇನಾ, ನೀತು ಗೌಡ, ತಿಲಕ್ , ಚಿಕ್ಕಣ್ಣ, ತಬಲಾ ನಾಣಿ, ಮಾಸ್ಟರ್ ಆನಂದ್, ಉಗ್ರಂ ಮಂಜು, ಉದಯ್ ಹಾಗೂ ಮುಂತಾದವರು…

ಹೆಣ್ಣು, ಹೊನ್ನು , ಮಣ್ಣು ಈ ಮೂರು ಮನುಷ್ಯನ ಬದುಕಿನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ಮನುಷ್ಯನ ದುರಾಸೆಗೆ ಬಿದ್ದು ಹಣದ ಹಿಂದೆ ಹೋದವರು ಬಹಳ ಬೇಗ ತಮ್ಮ ಬದುಕಿನಲ್ಲಿ ಹೆಣವಾಗಿ ಬಿಡುತ್ತಾರೆ ಅನ್ನೋ ಮಾತಿದೆ. ಅದು ಎಷ್ಟು ಸತ್ಯವೋ ಸುಳ್ಳೋ ತಿಳಿಯದು, ಆದರೆ ಅಂತಹದ್ದೇ ದುರಾಸೆಗೆ ಬಿದ್ದವರ ಬದುಕಿನಲ್ಲಿ ಹೇಗೆಲ್ಲಾ ತಂತ್ರ , ಕುತಂತ್ರಗಳು , ಪ್ರೀತಿ, ವ್ಯಾಮೋಹದ ಹಾದಿಯಲ್ಲಿ ಹಲವು ತಿರುವುಗಳೊಂದಿಗೆ ಹೇಗೆ ಹೆಣವಾಗಿಬಿಡುತ್ತಾರೆ ಎಂಬ ಕುತೂಹಲ ಅಂಶದೊಂದಿಗೆ ತೆರೆ ಮೇಲೆ ಬಂದಿರುವಂಥ ಚಿತ್ರವೇ “ಬೈ ಪಾಸ್ ರೋಡ್”
ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಸಿಲಿಕಾನ್ ಸಿಟಿ ಬೆಂಗಳೂರಿನ ಕರಾಳ ಮುಖದ ದರ್ಶನವನ್ನು ತೋರಿಸುತ್ತಾ ನಾಯಕ ಪ್ರಶಾಂತ್(ಭರತ್‌ಕುಮಾರ್) ತನ್ನದೇ ಬಿಲ್ಡರ್ ಕಂಪನಿಯಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಳ್ಳುತ್ತಾ ರಾಯಲ್ ಜೀವನ ನಡೆಸುತ್ತಾನೆ.

ಅದೇ ಕಂಪೆನಿಯ ಸಂಪೂರ್ಣ ಉಸ್ತುವಾರಿಕೆ ನೋಡಿಕೊಳ್ಳುವ ಸುಮಾ(ನೇಹಾ ಸಕ್ಸೇನಾ) ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಿಶೋರ್(ತಿಲಕ್) ಈ ಮೂವರು ಗೆಳೆಯರು. ಕಾಲೇಜು ಮುಗಿಸಿದ ನಂತರ ತಮ್ಮದೇ ಆದ ಹಾದಿಯನ್ನು ಕಂಡುಕೊಂಡಿರುತ್ತಾರೆ.

ಇದರ ನಡುವೆ ಭೂ ಮಾಫಿಯಾ ಗುದ್ದಾಟದ ಸಾಗುತ್ತದೆ. ಪ್ರಶಾಂತ ಕಂಪೆನಿಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವ ಸುಮಾ ಗಂಡ ರಾಜೇಶ್ ಗೆ ಇವರಿಬ್ಬರ ಮೇಲೆ ಅನುಮಾನ ಬಂದ ಕಾರಣ ಕೆಲಸ ಬಿಡುವ ಪರಿಸ್ಥಿತಿ ಬರುತ್ತದೆ. ಆಗ ತನ್ನ ಜಾಗಕ್ಕೆ ಪ್ರಿಯಾ(ನೀತುಗೌಡ) ಎಂಬ ಯುವತಿಯನ್ನು ತಂದು ಸೇರಿಸುತ್ತಾಳೆ.

ಪ್ರಿಯಾ ಚಿತ್ರರಂಗದಲ್ಲಿ ಸಹಕಲಾವಿದೆ ಯಾಗಿ ಕೆಲಸ ಮಾಡುವವಳು, ಕಂಪನಿ ಸೇರಿದ ಮೇಲೆ ಪ್ರಶಾಂತ್‌ಗೆ ತೀರ ಹತ್ತಿರ ವಾಗುತ್ತಾಳೆ. ಇಬ್ಬರೂ ವಿವಾಹವಾಗುತ್ತಾರೆ. ಸುಮಾನೇ ತನ್ನ ತಂಗಿಯಂತೆ ಪ್ರಿಯಾಳನ್ನು ನೋಡಿಕೊಳ್ಳುತ್ತಾಳೆ.

ಸದಾ ಕಂಪನಿ ಕೆಲಸದಲ್ಲೇ ಮುಳುಗಿದ್ದ ಈ ದಂಪತಿಗಳು ಹನಿಮೂನ್‌ಗಾಗಿ ನಂದಿಗ್ರಾಮ ದಲ್ಲಿರುವ ತಮ್ಮ ಎಸ್ಟೇಟ್‌ಗೆ ತೆರಳಲು ನಿರ್ಧರಿಸುತ್ತಾರೆ. ಸುಮಾ ಕಂಪನಿಯನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿ ಅವರನ್ನು ಹನಿಮೂನ್‌ಗೆ ಕಳಿಸುತ್ತಾಳೆ. ಇವರ ಹನಿಮೂನ್ ಜರ್ನಿ ಶುರುವಾದ ಮೇಲೆ ಕಥೆಯ ಸ್ವರೂಪವೇ ಬೇರೆ ತಿರುವು ತೆಗೆದುಕೊಳ್ಳುತ್ತದೆ.

ಪ್ರಿಯಾ ಬರೆದಿಟ್ಟ ನೋಟ್‌ವೊಂದು ಸುಮಾಗೆ ಸಿಗುತ್ತದೆ. ಅದರಲ್ಲಿ ಆಕೆ ಪ್ರಶಾಂತ್ ಮದುವೆಯಾಗಿ ರುವುದು ಆಸ್ತಿಗೋಸ್ಕರ, ಆಕೆಗಾಗಲೇ ಒಬ್ಬ ಪ್ರೇಮಿಯೂ ಇದ್ದಾನೆಂಬುದು ಗೊತ್ತಾಗುತ್ತದೆ. ಅದನ್ನು ಪ್ರಶಾಂತ್‌ಗೆ ತಿಳಿಸಲೆಂದೇ ಸುಮಾ ಕಾಲ್ ಮಾಡಿದರೂ ಫೋನ್ ಗೆ ನೆಟ್ ವರ್ಕ್ ಸಿಗದಂತೆ ಪ್ರಿಯಾ ತನ್ನ ಬುದ್ಧಿವಂತಿಕೆ ತೋರಿಸುತ್ತಾಳೆ. ಮಾರ್ಗ ಮಧ್ಯೆ ಟ್ರಕ್ಕಿಂಗ್ ಮಾಡುತ್ತಾ ಕಾಡಿನೊಳಗೆ ಸಿಲುಕಿಕೊಂಡ ಗಾಬರಿಗಜ (ಚಿಕ್ಕಣ್ಣ) ಆಕಸ್ಮಿಕವಾಗಿ ಡ್ರಾಪ್ ಕೇಳುವ ನೆಪದಲ್ಲಿ ಇವರಿಗೆ ಜೊತೆಯಾಗುತ್ತಾನೆ. ನಂತರ ಮುಸ್ಲಿಂ ವ್ಯಕ್ತಿ ತಬಲಾ ನಾಣಿ ಹಾಗೂ ಮತ್ತೊಬ್ಬ ಕಾಡಿನೊಳಗೆ ಡ್ರಾಪ್ ಕೇಳುವ ನೆಪದಲ್ಲಿ ಸೇರಿಕೊಳ್ಳುತ್ತಾರೆ.

ಎಸ್ಟೇಟ್ ಸೇರಲು ಸುದೀರ್ಘ ಪ್ರಯಾಣ ಮಾಡುತ್ತಿರುವಾ ಗಲೇ ಇತ್ತ ಸುಮಾ ಪೋಲೀಸ್ ಅಧಿಕಾರಿ ಕಿಶೋರ್‌ಗೆ ಕಾಲ್‌ಮಾಡಿ ಪ್ರಿಯಾ ಮಾಡಿಕೊಂಡ ಎಲ್ಲಾ ಪ್ಲಾನ್ ಬಗ್ಗೆ ತಿಳಿಸುತ್ತಾಳೆ. ಆಗ ಅವರನ್ನು ಫಾಲೋ ಮಾಡಲು ಕಿಶೋರ್ ತನ್ನ ಇಬ್ಬರು ಗುಪ್ತಚರರನ್ನು ಬಿಟ್ಟು ಅವರಿಂದ ಮಾಹಿತಿ ಸಂಗ್ರಹಿಸುತ್ತಾನೆ. ಕೋಟ್ಯಂತರ ರೂಪಾಯಿಯ ಭೂ ವಿಚಾರದ ಗಲಾಟೆಯೂ ಪ್ರಶಾಂತ ನನ್ನು ಕೊಲ್ಲಲು ಸಂಚು ರೂಪಿಸಿರುತ್ತಾರೆ. ಹೀಗೆ ಕಥೆ ಸಾಗಿದಂತೆ ಒಂದರ ಮೇಲೊಂದರoತೆ ಹೆಣಗಳು ಉರುಳುತ್ತವೆ.
ಬೈ ಪಾಸ್ ರೋಡ್ ಏನು…
ಹೆಣಗಳು ಉರುಳಲು ಕಾರಣವೇನು…
ಕೊಲೆಗಾರ ಯಾರು…
ಸೂತ್ರಧಾರಿ ತಂತ್ರ ಗೆಲ್ಲುತ್ತಾ…
ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವೆಲ್ಲರೂ ಬೈ ಪಾಸ್ ರೋಡ್ ಚಿತ್ರವನ್ನು ನೋಡಬೇಕು.

ಇದೊಂದು ಥ್ರಿಲ್ಲರ್, ಮರ್ಡರ್ ಮಿಸ್ಟ್ರಿಯ ಜೊತೆಗೆ ಲವ್ ರೊಮ್ಯಾಂಟಿಕ್ ಪಯಣ ಬೆಸೆದುಕೊಂಡಿದೆ. ನಾಯಕರಾಗಿ ಭರತ್ ಕುಮಾರ್, ನಾಯಕಿರಾಗಿ ನೇಹಾ ಸಕ್ಸೇನಾ ಹಾಗೂ ನೀತು ಗೌಡ, ಪ್ರೇಮಿಯಾಗಿ ಚಿಕ್ಕಣ್ಣ , ಪೊಲೀಸ್ ಇನ್ಸ್ ಪೆಕ್ಟರ್ ಯಾಗಿ ತಿಲಕ್, ಮುಸ್ಲಿಂ ವ್ಯಕ್ತಿಯ ತಬಲಾನಾಣಿ , ಕಂಪನಿಯ ಮ್ಯಾನೇಜರ್ ಆಗಿ ಮಾಸ್ಟರ್ ಆನಂದ್ , ವಿಲನ್ ಪಾತ್ರದಲ್ಲಿ ಮಾಸ್ತಿಗುಡಿ ಉದಯ್ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಎಸ್.ಬಿ. ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ಕಟ್ ಹೇಳಿದ್ದು, ಚಿತ್ರದಲ್ಲಿ ಮತ್ತಷ್ಟು ವಿಚಾರ ಬೇಕಿತ್ತು ಅನಿಸುತ್ತದೆ. ಇದ್ದಲ್ಲೇ ಗಿರಕಿ ಹೊಡೆಯುತ್ತದೆ. ಹಾಸ್ಯ ಸನ್ನಿವೇಶಗಳು ತುರುಕಿದಂತಿದೆ. ಕುತೂಹಲ ಅಂಶವಿರುವುದ ರಿಂದ ಗಮನ ಸೆಳೆಯುತ್ತದೆ.

ಇಂತಹ ವಿಭಿನ್ನ ಚಿತ್ರವನ್ನು ಭರತ್‌ ರಾಜ್ ಎಂ. ಮತ್ತು ಬಿ.ಎನ್. ಮಹೇಶ್ ನಿರ್ಮಿಸಿದ್ದು, ಇವರ ಧೈರ್ಯವನ್ನು ಮೆಚ್ಚಲೇಬೇಕು. ಹಾಗೆಯೇ ನಿರಂಜನ್ ಬಾಬು ಅವರ ಕ್ಯಾಮೆರಾ ಕೈಚಳಕ ಉತ್ತಮವಾಗಿದೆ. ವಿಜಯಕೃಷ್ಣ ಅವರ ಹಿನ್ನೆಲೆ ಸಂಗೀತ ಗಮನಾರ್ಹವಾಗಿ ಮೂಡಿಬಂದಿದೆ. ಒಂದಷ್ಟು ಕುತೂಹಲಕಾರಿ ಘಟನೆಗಳು, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಬಂದಿರುವಂತಹ ಬೈ ಪಾಸ್ ರೋಡ್ ಚಿತ್ರವನ್ನು ಒಮ್ಮೆ ನೋಡಬಹುದು.

Related posts