Cini Reviews Cinisuddi Fresh Cini News 

“ಬಿಚ್ಚುಗತ್ತಿ”ಯಲ್ಲಿ ದುರ್ಗದ ಸದ್ದು ( ಚಿತ್ರ ವಿಮರ್ಶೆ)

ಚಿತ್ರ : ಬಿಚ್ಚುಗತ್ತಿ
ನಿರ್ದೇಶಕ : ಹರಿ ಸಂತೋಷ್
ನಿರ್ಮಾಪಕರು : ಓಂ ಸಾಯಿ ಕೃಷ್ಣ ಪ್ರೊಡಕ್ಷನ್
ಸಂಗೀತ : ಹಂಸಲೇಖ , ನಕುಲ್ ಅಭ್ಯಂಕರ್ ಛಾಯಾಗ್ರಾಹಕ : ಗುರುಪ್ರಸಾದ್ ರೈ
ತಾರಾಗಣ : ರಾಜವರ್ಧನ್, ಹರಿಪ್ರಿಯಾ, ಪ್ರಭಾಕರ್ ಶಿವರಾಮಣ್ಣ, ಶ್ರೀನಿವಾಸ್ ಮೂರ್ತಿ, ಸ್ಪರ್ಶ ರೇಖಾ ಹಾಗೂ ಮುಂತಾದವರು…

ಯಾವುದೇ ಐತಿಹಾಸಿಕ , ಭಕ್ತಿ ಪ್ರಧಾನ ಚಿತ್ರಗಳು ಅದರದ್ದೇ ಆದ ಮಹತ್ವವನ್ನು ಹೊಂದಿರುತ್ತೆ. ಅದನ್ನು ಪ್ರೇಕ್ಷಕರ ಮುಂದೆ ತರುವುದು ಕೂಡ ಅಷ್ಟೇ ಸೂಕ್ಷ್ಮವಾಗಿರುತ್ತದೆ. ಈಗಾಗಲೇ ಬಂದಿರುವ ಕೆಲವು ಐತಿಹಾಸಿಕ, ಭಕ್ತಿ ಪ್ರಧಾನ ಚಿತ್ರಗಳು ನೋಡುಗರ ಗಮನ ಸೆಳೆದಿದೆ. ಆ ಸಾಲಿಗೆ ಮತ್ತೊಂದು ಪ್ರಯತ್ನವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ ದುರ್ಗದ ಕಥಾನಕ “ಬಿಚ್ಚುಗತ್ತಿ” ದಳವಾಯಿ ದಂಗೆ ಮೊದಲ ಭಾಗವಾಗಿ ಡಾ . ಬಿ.ಎಲ್ ವೇಣು ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಮುಖ್ಯ ಕಥಾ ಹಂದರವು , ಕಳೆದುಕೊಂಡಿದ್ದ ತನ್ನ ಅಧಿಕಾರವನ್ನು ಬಿಚ್ಚುಗತ್ತಿ ಭರಮಣ್ಣ ನಾಯಕ ಹೇಗೆ ಮರಳಿ ಪಡೆದುಕೊಂಡ ಎಂದು ಹೇಳುವ ಸಾಹಸದ ಎಳೆಯ ಈ ಕಥಾನಕ. ಭರಮಣ್ಣ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಾಜವರ್ಧನ್ ತನಗೆ ಸಿಕ್ಕ ಪ್ರಥಮ ಪ್ರಯತ್ನದಲ್ಲೇ ಬಹಳ ಶ್ರಮವಹಿಸಿ ಆ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಕಟ್ ಮಸ್ತ್ ಆಗಿ ಕಾಣುವ ರಾಜವರ್ಧನ್ ಸಾಹಸ ದೃಶ್ಯಗಳನ್ನು ಭರ್ಜರಿಯಾಗಿ ನಿಭಾಯಿಸಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಾಯಕನಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.


ಇನ್ನು ಚಿತ್ರದಲ್ಲಿ ಗುಡಿಕೋಟೆಯ ರಾಣಿ ಸಿದ್ದಾಂಬೆಯಾಗಿ ಕಾಣಿಸಿಕೊಂಡಿರುವ ನಾಯಕಿ ಹರಿಪ್ರಿಯಾ ಐತಿಹಾಸಿಕ ಪಾತ್ರಗಳಿಗೂ ಸೈ ಎನ್ನುತ್ತಾ , ಕತ್ತಿ ವರಸೆ, ಕುದುರೆ ಸವಾರಿ ಸೇರಿದಂತೆ ಸಾಹಸ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ಹಾಗೆಯೇ ತೆಲುಗಿನ ನಟ ಪ್ರಭಾಕರ್ ಮುದ್ದಣ್ಣನ ಪಾತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಕೈಯಲ್ಲಿ ಡಬ್ಬಿಂಗ್ ಮಾಡಿಸಿರುವುದು ಚಿತ್ರದ ಮೈನಸ್ ಪಾಯಿಂಟ್ ಆಗಿದ್ದು , ಕೇಳುವುದಕ್ಕೆ ಕಷ್ಟಕರವಾಗಿದೆ.

ಉಳಿದಂತೆ ಹಿರಿಯ ಕಲಾವಿದರಾದ ಶಿವರಾಮಣ್ಣ , ಶ್ರೀನಿವಾಸ ಮೂರ್ತ , ಸೇರಿದಂತೆ ಹಲವಾರು ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಇನ್ನು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ಪರ್ಶ ರೇಖಾ ಅವರ ನಟನೆ ಕೂಡಾ ಉತ್ತಮವಾಗಬೇಕಿತ್ತು , ಆಗಾಗ ಅವರು ಮಾತನಾಡುವ ಸಂಭಾಷಣೆಯಲ್ಲಿ ಸೊಗಡಿನ ಛಾಪು ಇಲ್ಲದಂತೆ ಕಾಣುತ್ತದೆ.

ಆದರೆ ಒಂದು ಉತ್ತಮ ಪ್ರಯತ್ನವನ್ನ ನಿರ್ದೇಶಕ ಹರಿ ಸಂತೋಷ್ ಮಾಡಿದ್ದಾರೆ. ಏಕೆಂದರೆ ಇಡೀ ಚಿತ್ರದ ಕಥೆ ನಡೆಯುವುದೇ ಭರಮಣ್ಣ ನಾಯಕ ಹಾಗೂ ಮುದ್ದಣ್ಣನ ಪಾತ್ರಗಳ ಮೇಲೆ. ಇನ್ನು ಘಟನೆ ನಡೆದ ಚಿತ್ರದುರ್ಗದ ಮಣ್ಣಿನಲ್ಲೇ ಚಿತ್ರೀಕರಣ ನಡೆಸಿರುವುದು ಚಿತ್ರಕಥೆಗೆ ಜೀವಂತಿಕೆ ತುಂಬಲು ನೆರವಾಗಿದೆ.

1568ರಿಂದ 1779ರವರೆಗೆ ಚಿತ್ರದುರ್ಗದ ಕೋಟೆಯನ್ನು ಆಳಿದ 13 ಜನ ಪಾಳೇಗಾರರಲ್ಲಿ ಪ್ರಥಮ ಪಾಳೇಗಾರ ರಾಜಾ ಬಿಚ್ಚುಗತ್ತಿ ತಿಮ್ಮಣ್ಣ ನಾಯಕ. ನಂತರ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ. ಹೆಬ್ಬುಲಿ ಹಿರೇಮದಕರಿ ನಾಯಕ ಅವರಾದ ಮೇಲೆ ಬರುವುದು ಗಂಡುಗಲಿ ಮದಕರಿ ನಾಯಕ.

ಇವರ ಆಡಳಿತ ನಿರಾತಂಕವಾಗಿ ನಡೆಯಿತಾದರೂ 1675ರಿಂದ 1685ರ ಅವಧಿಯಲ್ಲಿ ದಳವಾಯಿಯಾಗಿದ್ದ ಪಂಚಮರ ಮುದ್ದಣ್ಣ ಇಡೀ ಸೇನೆಯನ್ನು ತನ್ನ ವಶದಲ್ಲಿಸಿಕೊಂಡು ಹೆಸರಿಗೆ ಮಾತ್ರ ಬಲಹೀನ ಪಾಳೇಗಾರರನ್ನು ಸಿಂಹಾಸನದಲ್ಲಿ ಕೂರಿಸಿ ದೊರೆಯನ್ನು ಹಾಗೂ ಚಿತ್ರದುರ್ಗದ ಪ್ರಜೆಗಳನ್ನು ತನ್ನ ದರ್ಪ, ದೌರ್ಜನ್ಯಗಳಿಂದ ಹಿಂಸಿಸುತ್ತಾ ತಾನೇ ಆಡಳಿತ ನಡೆಸಲಾರಂಭಿಸಿದ.

1686ರಲ್ಲಿ ಪಟ್ಟವನ್ನೇರಿದ ದೊರೆ ಲಿಂಗಣ್ಣ, ನಾಯಕ ಮುದ್ದಣ್ಣನನ್ನು ವಿರೋಧಿಸಿದ್ದರಿಂದ ಅದು ದಳವಾಯಿ ದಂಗೆಗೆ ಕಾರಣವಾಯಿತು. ಆ ಕಾಲಘಟ್ಟದಲ್ಲಿ ನಡೆಯುವ ಕಥೆಯೇ ಬಿಚ್ಚುಗತ್ತಿಯ ಕಥಾಹಂದರ. ದರ್ಬಾರ್ ಹಾಲ್, ಅರಮನೆ ಪ್ರಾಂಗಣ ಅಲ್ಲದೆ ಆಗಿನ ಕಾಲದ ಪರಿಸರವನ್ನು ಮರು ಸೃಷ್ಟಿ ಮಾಡಿರುವುದು ಸ್ಕ್ರೀನ್ ಮೇಲೆ ಉತ್ತಮವಾಗಿ ಮೂಡಿಬಂದಿದೆ. ಚಿತ್ರದ ಓಟ ಮತ್ತಷ್ಟು ಬಿಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು, ವಿಶೇಷವಾಗಿ ಈ ಚಿತ್ರಕ್ಕೆ ಸಂಗೀತ ನೀಡಿರುವ ಹಂಸಲೇಖ ಹಾಗೂ ನಕುಲ್ ಅಭ್ಯಂಕರ್ ಅವರ ಕೆಲಸ ಅಚ್ಚುಕಟ್ಟಾಗಿದೆ.

ಅದೇ ರೀತಿ ಛಾಯಾಗ್ರಾಹಕ ಗುರುಪ್ರಸಾದ್ ರೈ ಕೆಲಸ ಕೂಡ ಗಮನಾರ್ಹವಾಗಿದೆ. ಇಂತಹ ಒಂದು ಐತಿಹಾಸಿಕ ಚಿತ್ರವನ್ನು ನಿರ್ಮಿಸಿದಂತ ನಿರ್ಮಾಪಕರುಗಳ ಧೈರ್ಯವನ್ನು ಮೆಚ್ಚಲೇಬೇಕು. ಆಗಾಗ ಬರುವ ಇಂತಹ ವಿನೂತನ ಪ್ರಯತ್ನದ ಚಿತ್ರವನ್ನು ಪ್ರೇಕ್ಷಕರು ಒಮ್ಮೆ ನೋಡಲೇಬೇಕು.

Related posts