Cini Reviews Cinisuddi Fresh Cini News 

“ಬೆಂಕಿ”ಯಲ್ಲಿ ಮಮತೆಯ ಗಾಳಿ (ಚಿತ್ರವಿಮರ್ಶೆ-ರೇಟಿಂಗ್ : 3.5/5)

ಚಿತ್ರ : ಬೆಂಕಿ
ನಿರ್ದೇಶಕ : ಎ.ಆರ್. ಶಾನ್ ನಿರ್ಮಾಪಕ : ಕೆ.ವಿ. ರವಿ ಕುಮಾರ್, ಅನೀಶ್ ತೇಜೇಶ್ವರ್, ಶ್ರೀಕಾಂತ್ .ಪಿ, ನಂದೀಶ್.ಎಲ್.ಆರ್
ಸಂಗೀತ : ಆನಂದ್ ರಾಜ ವಿಕ್ರಮ್
ಛಾಯಾಗ್ರಾಹಕ : ವೀನಸ್ ನಾಗರಾಜ್ ಮೂರ್ತಿ
ತಾರಾಗಣ : ಅನೀಶ್ ತೇಜೇಶ್ವರ್, ಸಂಪದಾ ಹುಲಿವಾನ, ಶೃತಿ ಪಾಟೀಲ್​, ಅಚ್ಯುತ್​ ಕುಮಾರ್​​​, ಹರಿಣಿ, ಸಂಪತ್‌, ಉಗ್ರಂ ಮಂಜು ಹಾಗೂ ಮುಂತಾದವರು…
ರೇಟಿಂಗ್ : 3.5/5

ಹಳ್ಳಿ ಸೊಗಡಿನ ಜೀವನ ಬಾಂಧವ್ಯದ ಬದುಕು, ಅಣ್ಣ ತಂಗಿಯರ ಸಂಬಂಧ, ರಾಗ, ದ್ವೇಷ, ಪ್ರೀತಿ, ಹೊಡೆದಾಟ, ಹೀಗೆ ನಾನಾ ವಿಚಾರಗಳ ಸಂಗಮದ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಅದರಲ್ಲೂ ಊರಲ್ಲಿ ತನ್ನದೇ ಆರ್ಭಟದೊಂದಿಗೆ ಯಾವುದಕ್ಕೂ ಜಗ್ಗದ ನಾಯಕ ತನ್ನ ಮುದ್ದಿನ ತಂಗಿಯ ವಿಚಾರಕ್ಕೆ ಯಾವುದೇ ಕೊರತೆ ಬಾರದಂತೆ ಸಿಡಿದೇಳುವ ಅಣ್ಣನ ಬಾಂಧವ್ಯದ ಕಥಾನಕ ಈ “ಬೆಂಕಿ”ಯಲ್ಲಿ ಅಡಕಗೊಂಡಿದೆ.

ಚಿತ್ರದ ಕಥಾಹಂದರ ತೆರೆದುಕೊಳ್ಳೋದೇ ಹಳ್ಳಿಯ ಪರಿಸರದ ನಡುವೆ. ನಾಯಕ ಬೆಂಕಿ(ಅನೀಶ್ ತೇಜೇಶ್ವರ್) ಯಾರಿಗೂ ಜಗ್ಗದ ಮಗ. ಅವನಿಗೆ ಮುದ್ದಾದ ತಂಗಿ (ಶೃತಿ ಪಾಟೀಲ್) ನಾಯಕ ಬೆಂಕಿಗೆ ತನ್ನ ತಂಗಿಯೇ ಜೀವ. ಆಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು, ಒಳ್ಳೆ ವಿದ್ಯಾಭ್ಯಾಸ ಕೊಡಿಸಿ ಅದ್ದೂರಿಯಾಗಿ ಮದುವೆ ಮಾಡಿ ಗಂಡನ ಮನೆಗೆ ಕಳಿಸಬೇಕೆಂಬ ಮಹದಾಸೆ ಹೊತ್ತಿರುತ್ತನೆ.

ತನ್ನ ಕುಟುಂಬ ಹಾಗೂ ತನ್ನ ಗೆಳೆಯನೇ ಅವನ ಜೀವನದ ಬದುಕಾಗಿರುತ್ತದೆ. ಇದರ ನಡುವೆ ದೆವ್ವವಾಗಿ ಕಾಡುವ ನಾಯಕಿ ಪ್ರಿಯಾ(ಸಂಪದಾ ಹುಲಿವಾನ) ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರು ಟ್ರೆಂಡಿಂಗ್ ನಲ್ಲಿ ಇರಬೇಕೆಂದು ಗೆಳೆಯರ ಗುಂಪನ್ನು ಕಟ್ಟಿಕೊಂಡು ಆಡುವ ಆಟ ನಾಯಕನಿಗೆ ಪೀಕಲಾಟ ವಾಗುತ್ತದೆ.

ಇದನ್ನೇ ಅಸ್ತ್ರವಾಗಿಟ್ಟುಕೊಂಡು ನಾಯಕ ಕೂಡ ಮತ್ತೊಂದು ಗೇಮ್ ಆಡುತ್ತಾನೆ. ಇವರಿಬ್ಬರ ಪ್ರೇಮಾಂಕರಕ್ಕೆ ಕೂಡ ದಾರಿ ಮಾಡಿಕೊಡುತ್ತದೆ. ಇನ್ನು ಮತ್ತೊಂದೆಡೆ ಮುದ್ದಾದ ತಂಗಿಯ ಮೇಲೆ ಊರಿನ ಕೆಲವು ಕಿಡಿಗೇಡಿಗಳ ಕಣ್ಣು ಕೂಡ ಬಿದ್ದಿರುತ್ತದೆ.

ಅವರಿಗೆ ತಕ್ಕ ಪಾಠವನ್ನು ಕಲಿಸುವ ಬೆಂಕಿ ತನ್ನ ಮುದ್ದಾದ ತೆಂಗಿಗೆ ಮದುವೆ ಮಾಡಲು ನಿರ್ಧರಿಸಿ ನಿಶ್ಚಿತಾರ್ಥವನ್ನ ನಡೆಸುತ್ತಾನೆ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಂಗಿಯ ಸಾವು ಇಡೀ ನಾಯಕನ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇಲ್ಲಿಂದ ಮುಂದೆ ನಡೆಯೋ ಘಟನೆಗಳೇ ನಿರೀಕ್ಷೆಗೂ ಮೀರಿದು.

ತಂಗಿ ಸತ್ತಿದ್ದು ಹೇಗೆ…
ಯಾರ ಕೈವಾಡ ಇದರಲ್ಲಿದೆ…
ಬೆಂಕಿ ಸುಡುವುದು ಯಾರನ್ನು..
ಹೀಗೆ ನಾನಾ ಪ್ರಶ್ನೆಗಳು ಎಲ್ಲರನ್ನೂ ಕಾಡಲು ತೊಡಗುತ್ತದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕಾದರೆ ನೀವು “ಬೆಂಕಿ”ನ ನೋಡಲು ಚಿತ್ರಮಂದಿರಕ್ಕೆ ಬರಬೇಕು. ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್. ಬಾಬು ರವರ ಪುತ್ರ ಎ. ಆರ್. ಶಾನ್ ನಿರ್ದೇಶನದ ಈ ಚಿತ್ರದಲ್ಲಿ ಅಣ್ಣ ತಂಗಿಯ ಬಾಂಧವ್ಯ ಬೆಸುಗೆ ಗಟ್ಟಿಯಾಗಿ ಕಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಬೆಂಕಿ ತಂಗಿಗಾಗಿ ತಂಗಾಳಿಯಂತೆ ಇರುವ ಅಣ್ಣ ತನ್ನ ಕುಟುಂಬ ಹಾಗೂ ಗೆಳೆಯನಿಗೆ ಯಾವುದೇ ತೊಂದರೆಯಾದರೂ ಬೆಂಕಿಯಂತೆ ಧಗಧಗಿಸುವ ಕಥಾಹಂದರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ.

ಪರಭಾಷೆ ಚಿತ್ರ ನೋಡಿದಂತೆ ಭಾಸವಾದರೂ, ನಾಯಕನ ಆರ್ಭಟ ಚಿತ್ರದುದ್ದಕ್ಕೂ ಆವರಿಸಿಕೊಂಡಿದೆ. ಚಿತ್ರದ ಮೊದಲ ಭಾಗ ಹಾಸ್ಯ ಸನ್ನಿವೇಶ, ಹಾಡುಗಳು ಗಮನ ಸೆಳೆಯುವಂತಿದೆ. ದ್ವಿತೀಯ ಭಾಗ ಹೊಡೆದಾಟದಲ್ಲೇ ಸಾಗಿದೆ.

ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಕಟ್ಟುಮಸ್ತಿನ ಹಳ್ಳಿ ಹೈದನಾಗಿ ಖದರ್ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ. ಹಾಸ್ಯ ಸನ್ನಿವೇಶಗಳಲ್ಲಿ ರಂಜಿಸಿ, ತಂಗಿಯ ಮುದ್ದಿನ ಅಣ್ಣನಾಗಿ ಭಾವನಾತ್ಮಕವಾಗಿ ಸೆಳೆಯುತ್ತಾ, ಅಷ್ಟೆ ರೋಚಕವಾದ ಆ್ಯಕ್ಷನ್ ದೃಶ್ಯವನ್ನ ಸಮರ್ಥವಾಗಿ ಎದುರಿಸಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಇಡೀ ತಂಡವನ್ನ ಕಟ್ಟಿಕೊಂಡು ಬೆಂಕಿಯನ್ನು ಅದ್ದೂರಿಯಾಗಿ ನಿರ್ಮಿಸಿರುವ ರೀತಿ ಮೆಚ್ಚುವಂತಿದೆ.

ಇನ್ನು ಚಿತ್ರದ ನಾಯಕಿ ಸಂಪದಾ ಮುದ್ದಾದ ದೆವ್ವವಾಗಿ ಎಂಟ್ರಿಕೊಟ್ಟು, ನಾಯಕನ ಪ್ರೀತಿಯನ್ನು ಗೆಲ್ಲುತ್ತಾಳೆ. ಸಿಕ್ಕ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಇನ್ನೂ ತಂಗಿಯ ಪಾತ್ರ ಮಾಡಿರುವ ಶ್ರುತಿ ಪಾಟೀಲ್ ಬಹಳ ಸೊಗಸಾಗಿ ಅಣ್ಣನ ಮುದ್ದಿನ ತಂಗಿಯಾಗಿ ನ್ಯಾಯ ಒದಗಿಸಿದ್ದಾರೆ. ನೊಂದ ಯುವತಿ ಆ ದೃಶ್ಯಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇನ್ನು ತಾಯಿಯ ಪಾತ್ರ ಮಾಡಿರುವ ಹರಿಣಿ, ತಂಗಿಯ ಭಾವಿ ಪತಿಯಾಗಿ ಚಂದ್ರಕೀರ್ತಿ, ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಅಚ್ಯುತ್ ಕುಮಾರ್, ರೌಡಿಯಾಗಿ ಉಗ್ರಂ ಮಂಜು ಸೇರಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಕೂಡ ಬಹಳ ಅಚ್ಚುಕಟ್ಟಾಗಿ ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ಆನಂದ್ ರಾಜಾವಿಕ್ರಮ್ ಸೌಂಡ್ ಗುನುಗುವಂತಿದೆ. ಇನ್ನು ಛಾಯಾಗ್ರಾಹಕ ವೀನಸ್‌ ನಾಗರಾಜ್‌ ಮೂರ್ತಿ ಕೈಚಳಕ ಸೊಗಸಾಗಿ ಮೂಡಿಬಂದಿದೆ. ವಿಕ್ರಂ ಮೋರ್ ಸಾಹಸ ,ಉಮೇಶ್ ಸಂಕಲನ ಕೂಡ ಗಮನಾರ್ಹವಾಗಿದೆ.

ಚಿತ್ರದ ಶೀರ್ಷಿಕೆ ಬೆಂಕಿ ಆದರೂ ಚಿತ್ರದಲ್ಲಿ ಮನಮಿಡಿಯುವ ಅಣ್ಣ ತಂಗಿಯ ಬಾಂಧವ್ಯದ ಕಥಾನಕದ ಮೂಲಕ ಮಾಸ್ ಹಾಗೂ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಅಂಶಗಳು ಒಳಗೊಂಡಿದೆ. ಒಟ್ಟಾರೆ ಫ್ಯಾಮಿಲಿ ಕುಳಿತು ನೋಡುವಂತಹ ಉತ್ತಮ ಚಿತ್ರವಾಗಿ ಹೊರಹೊಮ್ಮಲಿದೆ ಬೆಂಕಿ.

Related posts