Bollywood Cinisuddi Fresh Cini News 

ಝೈದ್ ಖಾನ್ ನಟನೆಯ “ಬನಾರಸ್” ಟ್ರೇಲರ್ ಬಿಡುಗಡೆ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ನಟ ಅರ್ಬಾಜ್ ಖಾನ್.

ಸ್ಯಾಂಡಲ್ ವುಡ್ ನ ಸದ್ದು ದೇಶ, ವಿದೇಶಗಳಲ್ಲಿ ರಾರಾಜಿಸುತ್ತಿದೆ. ಹೊಸತನ ವಿಭಿನ್ನ ಪ್ರಯತ್ನದ ಅದ್ದೂರಿ ಚಿತ್ರ ನಿರ್ಮಾಣದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡು ಪ್ಯಾನ್ ಇಂಡಿಯಾ ಮೂಲಕ ಭಾರೀ ಸದ್ದನ್ನು ಮಾಡುತ್ತಿದೆ. ಆ ನಿಟ್ಟಿನಲ್ಲಿ ಈಗ ಬನಾರಸ್ ಚಿತ್ರ ಕೂಡ ಅದ್ಧೂರಿಯಾಗಿ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರವೂ ಕೂಡ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಶಾಸಕ ಜಮೀರ್ ಅಹ್ಮದ್‍ಖಾನ್ ಪುತ್ರ ಝೈದ್‍ಖಾನ್ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಬರಲು ಸಿದ್ಧರಾಗಿದ್ದಾರೆ.ಈ ಚಿತ್ರವನ್ನ ಬೆಲ್‍ಬಾಟಂ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಗರದ ಒರಾಯನ್ ಮಾಲ್ ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಟ, ನಿರ್ಮಾಪಕ ಅರ್ಬಾಜ್ ಖಾನ್ ಹಿಂದಿ ಟ್ರೈಲರ್ ಬಿಡುಗಡೆ ಮಾಡಿದರೆ, ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಹಾಗೂ ಇತರ ಭಾಷೆಗಳ ಟ್ರೇಲರ್ ಬಿಡುಗಡೆ ಮಾಡಿದರು.

ಹಿಂದಿ ಭಾಷೆಯ ಟ್ರೇಲರ್ ಬಿಡುಗಡೆ ಮಾಡಿದ ನಂತರ ಅರ್ಬಾಸ್ ಖಾನ್ ಮಾತನಾಡುತ್ತಾ ನಟ ಝೈದ್‍ಖಾನ್ ನನ್ನ ಆತ್ಮೀಯ ಸಹೋದರ, ನಾನು ಟ್ರೈಲರ್ ನೋಡದೆ. ಟೈಮ್ ಟ್ರಾವೆಲ್ ಸ್ಟೋರಿ ಆಗಿದ್ದು, ಬಹಳ ಕುತೂಹಲಕಾರಿಯಾಗಿ ಸೊಗಸಾಗಿ ಬಂದಿದೆ. ಇಂಡಸ್ಟ್ರಿಯಲ್ಲಿ ಸ್ಟಾರ್ ನಟರಾಗಿ ಬೆಳೆಯಲಿ ಎಂದು ಶುಭ ಕೋರಿದರು. ಇನ್ನು ಮತ್ತೊಬ್ಬ ಮುಖ್ಯ ಅತಿಥಿ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡುತ್ತಾ ಹೀರೋ ಬಹಳ ಸೊಗಸಾಗಿ ಕಾಣುತ್ತಾನೆ. ನನ್ನ ಮನೆಗೆ ಬಂದು ಟ್ರೇಲರ್ ಬಿಡುಗಡೆ ಮಾಡಿ ಕೊಡಬೇಕೆಂದು ಕೇಳಿದ. ನಾನು ಸ್ವಲ್ಪ ಬ್ಯುಸಿ ಇದೀನಿ ಎಂದರೂ ಬಿಡದೆ ನೀವೇ ಬರಬೇಕು ಎಂದು ಒತ್ತಾಯ ಮಾಡಿದ ಹಾಗಾಗಿ ಈ ಯುವ ನಟನಿಗಾಗಿ ಬಂದೆ. ಟ್ರೇಲರ್ ಬಹಳ ಸೊಗಸಾಗಿ ಮಾಡಿದ್ದಾರೆ. ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಈ ಚಿತ್ರದ ನಿರ್ದೇಶಕ ಜಯತೀರ್ಥ ಮಾತನಾಡುತ್ತಾ ಇದೊಂದು ಟೈಮ್‍ ಟ್ರಾವಲ್ ಚಿತ್ರ. ಅಪ್ಪಟ ಪ್ರೇಮಕಥೆಯ ಜೊತೆಗೆ ಥ್ರಿಲ್ಲರ್ ಕಂಟೆಂಟ್ ಕೂಡ ಇದೆ. ಬನಾರಸ್ ಎನ್ನುವ ಲೊಕೇಶನ್ನೇ ಈ ಚಿತ್ರದ ನಿಜವಾದ ನಾಯಕ. ಝೈದ್‍ಖಾನ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿಯಾಗಿ ಸೋನಾಲ್ ಮಂತೇರೋ ಕೂಡ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಎಲ್ಲಾ ಪಾತ್ರಧಾರಿಗಳು ಕೂಡ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದೃಶ್ಯ ವೈಭವ ಹಾಗೂ ಸುಮಧುರ ಗೀತೆಗಳನ್ನು ಚಿತ್ರೀಕರಿಸಿದ್ದೇವೆ. ನೀವೆಲ್ಲರೂ ಈ ಚಿತ್ರವನ್ನ ನೋಡಿ ಪ್ರೋತ್ಸಾಹಿಸಿ ಬೆಂಬಲಿಸಿ ಎಂದು ಕೇಳಿಕೊಂಡರು.

ಈ ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಝೈದ್‍ಖಾನ್ ಮಾತನಾಡುತ್ತಾ ಪ್ಯಾನ್‍ ಇಂಡಿಯಾ ಸಿನಿಮಾ ಮಾಡಲು ಕಟೆಂಟ್ ಮುಖ್ಯವೇ ಹೊರತು ಹೊಸ ನಾಯಕ ಅಥವಾ ಸ್ಟಾರ್ ಮುಖ್ಯವಲ್ಲ, ನಾನೊಬ್ಬ ಕಲಾವಿದ, ನನಗೆ ಜಾತಿ, ಧರ್ಮ, ಮತ ಇಲ್ಲ. ಹಲವು ವರ್ಷಗಳ ಆಸೆ ಈಗ ಈಡೇರಿದೆ. ಈ ಚಿತ್ರದ ನಿರ್ಮಾಪಕರು ನನ್ನ ಗಾಡ್ ಫಾದರ್, ಎಲ್ಲರ ಸಹಕಾರ ತುಂಬಾ ಚೆನ್ನಾಗಿದೆ. ಈ ಚಿತ್ರ ನೀವೆಲ್ಲರು ಚಿತ್ರಮಂದಿರಕ್ಕೆ ಬಂದು ನೋಡಿ ನಮ್ಮನ್ನು ಹರಸಿ ಎಂದು ಹೇಳಿಕೊಂಡು. ಈ ಚಿತ್ರದ ನಾಯಕಿ ಸೋನಲ್ ಮಂತೇರೋ ಮಾತನಾಡುತ್ತಾ ಈ ಚಿತ್ರ ನನ್ನ ಸಿನಿ ಬದುಕಿನ ಬಹಳ ವಿಶೇಷವಾದ ಚಿತ್ರ. ಈ ಸಿನಿಮಾದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಇಡೀ ತಂಡ ತುಂಬ ಚೆನ್ನಾಗಿ ನೋಡಿಕೊಂಡಿದೆ. ನಮ್ಮ ಚಿತ್ರವನ್ನು ನೀವೆಲ್ಲರೂ ನೋಡಿ ಎಂದರು.

ಇನ್ನು ಈ ಚಿತ್ರದ ನಿರ್ಮಾಪಕ ತಿಲಕ್‍ರಾಜ್ ಬಲ್ಲಾಳ್ , ಹಿರಿಯ ಕಲಾವಿದರಾದ ಅಚ್ಯುತ್‍ ಕುಮಾರ್, ಸುಜಯ್ ಶಾಸ್ತ್ರಿ , ಸಪ್ನಾರಾಜ್, ಬರ್ಖತ್‍ ಅಲಿ , ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ ಚಿತ್ರದ ವಿಶೇಷತೆ ಕುರಿತಂತೆ ಮಾಹಿತಿ ಹಂಚಿಕೊಂಡರು. ಈಗಾಗಲೇ ಈ ಚಿತ್ರದ ಹಾಡುಗಳು ಬಹಳಷ್ಟು ವೈರಲ್ ಆಗಿ ಸದ್ದು ಮಾಡಿದ್ದು , ಚಿತ್ರದ ಟ್ರೇಲರ್ ಕೂಡ ಎಲ್ಲರ ಗಮನವನ್ನು ಸೆಳೆದಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬನಾರಸ್ ಚಿತ್ರ ನವೆಂಬರ್ 4ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Related posts