Cini Reviews Cinisuddi Fresh Cini News 

ಶರಣ್ ಅಭಿನಯದ “ಅವತಾರಪುರುಷ” ಚಿತ್ರ ಹೇಗಿದೆ..? (ಚಿತ್ರವಿಮರ್ಶೆ : ರೇಟಿಂಗ್ -3.5/5

ರೇಟಿಂಗ್ :3.5/5

ಚಿತ್ರ : ಅವತಾರಪುರುಷ
ನಿರ್ದೇಶಕ : ಸುನಿ
ನಿರ್ಮಾಪಕ : ಪುಷ್ಕರ್ ಮಲ್ಲಿಕಾರ್ಜುನಯ್ಯ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಾಹಕ : ವಿಲಿಯಂ ಡೇವಿಡ್
ತಾರಾಗಣ : ಶರಣ್ , ಆಶಿಕಾ ರಂಗನಾಥ್, ಸುಧಾರಣೆ , ಸಾಯಿಕುಮಾರ್, ಭವ್ಯ , ಸಾಧು ಕೋಕಿಲ ,ವಿಜಯ್ ಚೆಂಡೂರ್ , ಅಶುತೋಷ್ ರಾಣಾ , ಬಾಲಾಜಿ ಮನೋಹರ್, ಬಿ. ಸುರೇಶ್, ಶ್ರೀನಗರ ಕಿಟ್ಟಿ ಹಾಗೂ ಮುಂತಾದವರು…

ಅನಾದಿಕಾಲದಿಂದಲೂ ವಾಮಾಚಾರ , ಮಾಟ, ಮಂತ್ರವು ತನ್ನದೇ ಒಂದು ಲೋಕವನ್ನು ಸೃಷ್ಟಿಸಿಕೊಂಡು, ತನಗೆ ಬೇಕಾದ್ದನ್ನ ಪಡೆಯುವುದಕ್ಕೆ ಹಲವಾರು ಸಿದ್ಧ ತಂತ್ರವನ್ನ ರೂಪಿಸಿಕೊಳ್ಳುವ ವಿಚಾರವು ಸರ್ವೇ ಸಾಮಾನ್ಯವಾಗಿ ತಿಳಿದಿರುವ ವಿಚಾರವೇ. ಅದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ. ಅದರಿಂದ ಆಗುವ ಅನಾಹುತಗಳು, ಸರಿ , ತಪ್ಪುಗಳು ಹೇಗಿರುತ್ತೆ ಎಂಬುವುದು ಯಕ್ಷ ಪ್ರಶ್ನೆಯಾಗೇ ಉಳಿದಿದೆ ಎನ್ನಬಹುದು. ಇಂತಹದೇ ಕಥಾನಕದ ಮೂಲಕ ಹಾಸ್ಯದ ಹಿನ್ನೆಲೆಯಲ್ಲಿ ಸಂಬಂಧಗಳ ಬೆಸುಗೆ, ಪ್ರೀತಿಯ ಸಿಂಚನದ ನಡೆಯ ಮೂಲಕ ಗಮನ ಸೆಳೆದಿರುವಂತಹ ಚಿತ್ರವೇ “ಅವತಾರಪುರುಷ”.

ಅತ್ಯಂತ ಪ್ರಭಾವಶಾಲಿ ತ್ರಿಶಂಕು ಮಣಿಯ ಪಡೆಯುವ ವಿಚಾರದಲ್ಲಿ ಬ್ರಹ್ಮ ಜೋಯಿಸ್ ಹಾಗೂ ತಾರಕನ ಮಧ್ಯೆ ದೊಡ್ಡ ಮಟ್ಟದ ತಂತ್ರಗಾರಿಕೆ ಎದುರಾಗುತ್ತದೆ. ಒಳಿತಿಗಾಗಿ ಮೀಸಲಾಗಬೇಕೆಂಬ ಬ್ರಹ್ಮ ಜೋಯಿಸ್ ಕಾರ್ಯಕ್ಕೆ ತಾರಕನ ತಂತ್ರ, ಕುತಂತ್ರಗಳು ಅಡ್ಡಿಯಾಗುತ್ತವೆ. ಇದು ಸಂರಕ್ಷಣೆಯಾಗಬೇಕು ದುಷ್ಟರ ಕೈಗೆ ಸಿಗದಂತೆ ಅದಕ್ಕೊಂದು ದಿಗ್ಬಂಧನ ಮಾಡಿ ತನ್ನ ಪ್ರಾಣವನ್ನೇ ನೀಡುತ್ತಾರೆ. ದಶಕಗಳು ಕಳೆದಂತೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತವೆ.

ಸಿನಿಮಾದಲ್ಲಿ ಮಿಂಚಬೇಕೆಂಬ ಆಸೆ ಪಡುವ ನಾಯಕ ಅನಿಲ್(ಶರಣ್) ಒಬ್ಬ ಜ್ಯೂನಿಯರ್ ಆರ್ಟಿಸ್ಟ್ , ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸಬಲ್ಲ , ಡುಪ್ ಹಾಕುವುದರಲ್ಲಿ ಎತ್ತಿದ ಕೈ , ನೊಂದವರ ಕಷ್ಟಕ್ಕೆ ಸ್ಪಂದಿಸುವಂತಹ ಅನಿಲ್ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾನೆ. ಮತ್ತೊಂದೆಡೆ ತಾಯಿ (ಸುಧಾರಾಣಿ)ನೊಂದಿಗೆ ವಿದೇಶದಲ್ಲಿ ನೆಲೆಸಿರುವ ನಾಯಕಿ ಸಿರಿ(ಆಶಿಕಾ ರಂಗನಾಥ್) ತನ್ನ ಮಾವ ರಾಮಾ ಜೋಯಿಸ್ (ಸಾಯಿಕುಮಾರ್) ಕುಟುಂಬದಿಂದ ದೂರ ಉಳಿದ ಕಾರಣ ತಿಳಿಯುವ ಸಿರಿ ಹೇಗಾದರೂ ಮಾಡಿ ಮಾವನ ಮಗನನ್ನು ಹುಡುಕಿ ಕೊಟ್ಟು, ತನ್ನ ತಾಯಿಯನ್ನು ಮತ್ತೆ ಅವರ ಅಣ್ಣನ ಬಳಿ ಸೇರಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಿರಿ ಮಾವನ ಮನೆಗೆ ಪ್ರವೇಶ ಮಾಡುತ್ತಾಳೆ.

ಬಾಲ್ಯದಲ್ಲಿ ಕಳೆದುಹೋದ ಹುಡುಗನನ್ನು ಹುಡುಕುವ ಹಾದಿಯಲ್ಲಿ ಸಿರಿ ಒಬ್ಬ ಜ್ಯೂನಿಯರ್ ಆರ್ಟಿಸ್ಟ್ ಅನಿಲ್ ನನ್ನು ಆಡಿಷನ್ ಮೂಲಕ ಭೇಟಿಯಾಗುತ್ತಾಳೆ. ಆ್ಯಕ್ಟ್ ಮಾಡು ಹಣ ನೀಡುತ್ತೇನೆಂದು ಹೇಳುವ ಸಿರಿ ಶೃಂಗೇರಿ ಯಲ್ಲಿರುವ ಆಯುರ್ವೇದ ಪಂಡಿತ ತನ್ನ ಮಾವ ರಾಮಾಜೋಯಿಸ್ (ಸಾಯಿಕುಮಾರ್) ಮತ್ತು ಸುಶೀಲಾ (ಭವ್ಯಾ) ದಂಪತಿಯ ಮಗ ಕರ್ಣ ಚಿಕ್ಕವನಿದ್ದಾಗ ಅತ್ತೆ(ಸುಧರಾಣಿ)ಯ ಜೊತೆ ಬನಶಂಕರಿ ಜಾತ್ರೆಗೆ ಹೋದಾಗ ಅಲ್ಲಿ ಕಾಣೆಯಾಗಿರುತ್ತಾನೆ.

ಪ್ರೀತಿಯ ಮಗನನ್ನು ತಮ್ಮಿಂದ ದೂರಮಾಡಿದ ತಂಗಿಯ ಜೊತೆಗೂ ಜೋಯಿಸರು ಮಾತು ಬಿಟ್ಟಿರುತ್ತಾರೆ.ಈ ಎಲ್ಲಾ ನಿಜಸ್ಥಿತಿಯನ್ನು ಅನಿಲ್ ಗೆ ತಿಳಿಸುತ್ತಾಳೆ. ಮನೆ ಒಳಗೆ ಪ್ರವೇಶ ಮಾಡುವ ಅನಿಲ್ ತಾಯಿಯ ಪ್ರೀತಿಯನ್ನು ಪಡೆಯುತ್ತಾನೆ. ತಂದೆಯ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಾನೆ. ಆದರೆ ತಂದೆ ಒಪ್ಪುವುದಿಲ್ಲ. ಇನ್ನೂ ಕುಟುಂಬಸ್ಥರ ಗಮನ ಸೆಳೆಯಲು ಹರಸಾಹಸವೇ ಮಾಡುತ್ತಾನೆ. ಇವೆಲ್ಲವೂ ಹಾಸ್ಯದೊಂದಿಗೆ ಸಾಗುತ್ತವೆ.

ಇದರ ನಡುವೆ ಅನಿಲ್ ಹಾಗೂ ಸಿರಿಯ ಪ್ರೀತಿ ಬೆಸೆದುಕೊಳ್ಳುತ್ತದೆ. ಹಾಗೆಯೇ ಮತ್ತೊಂದೆಡೆ ಸಾಧುಕೋಕಿಲಾ ಮಾಟ, ಮಂತ್ರದ ಮೂಲಕ ಪ್ರೇತಾತ್ಮವನ್ನ ಆಹ್ವಾನಿಸಿಕೊಂಡು ಮತ್ತೆ ಅದನ್ನ ಕಳಿಸಲಾದೇ ತನ್ನ ಜೊತೆ ಇಟ್ಟುಕೊಂಡು ಸಾಗುವ ಹಾಸ್ಯ ಸನ್ನಿವೇಶಗಳು ಗಮನ ಸೆಳೆಯುತ್ತದೆ. ಇನ್ನೂ ಹಲವಾರು ತಿರುವುಗಳನ್ನು ಪಡೆಯುತ್ತಾ ಸಾಗುವ ಕತೆಯಲ್ಲಿ ತ್ರಿಶಂಕುಮಣಿ ಇರುವ ಸುಳಿವು ತಿಳಿಯುತ್ತದೆ. ಶ್ರೀನಗರ ಕಿಟ್ಟಿ ಮಗನಾಗಿ ಪ್ರವೇಶ ಪಡೆಯುತ್ತಾರೆ. ಮುಂದೆ ಇದು ಪ್ರಮುಖ ಘಟ್ಟಕ್ಕೆ ಬಂದು ನಿಲ್ಲುತ್ತದೆ.

ತ್ರಿಶಂಕು ಮಣಿ ಇರುವ ಜಾಗ ಯಾವುದು…
ನಿಜವಾದ ಪುತ್ರ ಯಾರು…
ನಾಯಕಿ ಪ್ರಯತ್ನ ಫಲಿಸಿತೆ…
ಭಾಗ -2 ಕ್ಕೆ ಲಿಂಕ್ ಏನು…
ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವೆಲ್ಲರೂ ಈ ಚಿತ್ರವನ್ನ ತೆರೆಮೇಲೆ ನೋಡಬೇಕು.

ಇನ್ನು ಎಂದಿನಂತೆ ನಾಯಕ ಶರಣ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಜ್ಯೂನಿಯರ್ ಆರ್ಟಿಸ್ಟ್ಗಳು ಪ್ರಮುಖ ಪಾತ್ರದ ಅವಕಾಶಕ್ಕಾಗಿ ಪರದಾಡುವ ರೀತಿ ಗೆ ಜೀವ ತುಂಬಿದಾರೆ. ಹಲವು ಶೇಡ್ ಗಳಲ್ಲಿ ಕಾಣುವ ಶರಣ್ ಗೆಳೆಯನಾಗಿ , ಪ್ರೇಮಿಯಾಗಿ , ಮುದ್ದಿನ ಮಗನಾಗಿ , ಹಾಸ್ಯ ಸನ್ನಿವೇಶಗಳಿಗೆ ಜೀವ ತುಂಬಿ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ. ಅದೇ ರೀತಿ ನಾಯಕಿಯಾಗಿ ಅಭಿನಯಿಸಿರುವ ಆಶಿಕಾ ರಂಗನಾಥ್ ಕೂಡ ಬಹಳ ಅಚ್ಚುಕಟ್ಟಾಗಿ ಅಭಿನಯಿಸಿದ್ದು, ಪರದೆ ಮೇಲೆ ಮುದ್ದು ಮುದ್ದಾಗಿ ಕಾಣಿಸುತ್ತಾರೆ.

ನಾಯಕನಿಗೆ ನಟನೆಯ ತರಬೇತಿಯನ್ನು ಹೇಳಿಕೊಡುವ ಸನ್ನಿವೇಶವು ಗಮನ ಸೆಳೆಯುತ್ತದೆ. ಆಯುರ್ವೆದಿದ ಪಂಡಿತನಾಗಿ ಸಾಯಿಕುಮಾರ್, ಮಾಟಗಾರನಾಗಿ ಬರುವ ಶ್ರೀನಗರ ಕಿಟ್ಟಿ , ವಾಮಾಚಾರಿ ಪಾತ್ರಧಾರಿಗಳು ಸೇರಿದಂತೆ ಹಿರಿಯ ನಟಿ ಭವ್ಯ , ಸುಧಾರಾಣಿ , ವಿಜಯ್ ಚೆಂಡೂರ್, ಸಾಧುಕೋಕಿಲಾ ಸೇರಿದಂತೆ ಹಲವಾರು ಕಲಾವಿದರು ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ.

ತನ್ನ ವಿಭಿನ್ನ ಕಥಾವಸ್ತು ಹಾಗೂ ಸಂಭಾಷಣೆ ಮೂಲಕವೇ ಹೆಚ್ಚು ಗಮನ ಸೆಳೆದಂತ ನಿರ್ದೇಶಕ ಸಿಂಪಲ್ ಸುನಿ ವಾಮಾಚಾರ, ಮಾಟ, ಮಂತ್ರದ ಸುತ್ತ ಕಥೆ ಹೆಣೆದಿರುವ ರೀತಿ ವಿಶೇಷವಾಗಿದೆ. ಈ ಅವತಾರ ಪುರುಷನ ಅವತಾರದ ಆದಿ ಗೊಂದಲದ ಗೂಡಿನಿಂತೆ ಕಾಣುತ್ತದೆ. ಶರಣ್ ಸಾಮರ್ಥ್ಯವನ್ನ ಹೆಚ್ಚು ಬಳಸಬಹುದಿತ್ತು. ನಿರ್ದೇಶಕರ ಜಾನರ್ ಕಥೆಯಲ್ಲ ಎಂಬುದು ಸ್ಪಷ್ಟ. ಪ್ರಯತ್ನದ ಫಲವಾಗಿ ಮನರಂಜನೆ ದೃಷ್ಟಿಯಿಂದ ನೋಡಬಹುದು.

ಇನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕಾಗಿ ಖರ್ಚು ಮಾಡಿರುವುದು ತೆರೆಮೇಲೆ ಕಾಣುತ್ತದೆ. ಈ ಅವತಾರ ಪುರುಷ ಭಾಗ-1 ಹಾಗೂ ಭಾಗ ಎರಡಕ್ಕೆ ಕೊಂಡಿಯಂತೆ ನಿರ್ಮಿಸಿರುವ ರೀತಿ ಗಮನಾರ್ಹವಾಗಿದೆ. ಮಾಟ, ಮಂತ್ರಗಳ ಜೊತೆಗೆ ಕಾಮಿಡಿ, ಸಸ್ಪೆನ್ಸ, ಥ್ರಿಲ್ಲರ್ ಅಂಶಗಳೊಂದಿಗೆ ತಾಂತ್ರಿಕವಾಗಿ ಹಿಡಿತದಲ್ಲಿರುವ ಈ ಅವತಾರ ಪುರುಷ ಗಮನ ಸೆಳೆಯುತ್ತದೆ. ಛಾಯಾಗ್ರಾಹಕ ವಿಲಿಯಂ ಡೇವಿಡ್ ಬಹಳ ಅಚ್ಚುಕಟ್ಟಾಗಿ ಕ್ಯಾಮೆರಾ ವರ್ಕ್ ನಿಭಾಯಿಸುವ ಮೂಲಕ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಇನ್ನು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಹಾಗೂ ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ವಿ.ಎಫ್.ಎಕ್ಸ್ ಕೆಲಸಗಳು ಬಹಳ ಉತ್ತಮವಾಗಿ ಮೂಡಿಬಂದಿದ್ದು, ಸಿನಿಪ್ರಿಯರು ಮನರಂಜನೆಗಾಗಿ ಈ ಅವತಾರ ಪುರುಷ ವನ್ನು ನೋಡಬೇಕು. ಭಾಗ -2 ನೋಡೋದಕ್ಕೆ ಬರುವರು ಈ ಭಾಗ-1ನೋಡಿದರೆ ಕಥೆಯ ಲಿಂಕ್ ಅರ್ಥವಾಗುತ್ತದೆ. ಎಲ್ಲರೂ ಚಿತ್ರಮಂದಿರದಲ್ಲಿ ಅವತಾರಪುರುಷ ದರ್ಶನ ಮಾಡಬಹುದು.

Related posts