Cinisuddi Fresh Cini News 

ಹಾಫ್’ ಚಿತ್ರದಲ್ಲಿ ಟಿಕ್ ಟಾಕ್ ಬೆಡಗಿ “ಅಥಿರಾ”

ಲೋಕೇಂದ್ರ ಸೂರ್ಯ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಹಾಫ್. ಈ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ಈ ಚಿತ್ರದ ಮೊದಲ ನಾಯಕಿಯ ಪೋಸ್ಟರ್ ಅನಾವರಣಗೊಂಡಿದೆ. ಮಲಯಾಳಂನಲ್ಲಿ ʻಲಾಲ್ ಜೋಸ್ʼ ಹೆಸರಿನ ಸಿನಿಮಾದಲ್ಲಿ ಅಥಿರಾ ನಟಿಸಿದ್ದಾರೆ. ಈಗ ಕನ್ನಡದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ ಹಾಫ್.

ಈಕೆಯ ತಂದೆ ಅರುಣ್ ಕುಮಾರ್ ಕರ್ನಾಟಕದವರು, ತಾಯಿ ಶ್ರೀಜಾ ಕೇರಳ ಮೂಲದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಥಿರಾ ಈಗಷ್ಟೇ ದ್ವಿದೀಯ ಪಿಯೂಸಿ ವ್ಯಾಸಂಗ ಮಾಡುತ್ತಿದ್ದಾರೆ. ನಟನೆ ಹವ್ಯಾಸವಾಗಬೇಕು, ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರಾಗಬೇಕು ಅಂದುಕೊಂಡಿರುವ ಅಥಿರಾಗೆ ಒಂದರ ಹಿಂದೊಂದು ಅವಕಾಶಗಳು ಕೈಗೆಟುಕುತ್ತಿವೆ. ಅದಕ್ಕೆ ಕಾರಣ ಟಿಕ್ ಟಾಕ್ ನಲ್ಲಿ ಈಕೆ ಸೃಷ್ಟಿಸಿದ್ದ ಹವಾ. ಬರೋಬ್ಬರಿ ಎಂಟು ಲಕ್ಷ ಫಾಲೋವರ್ ಗಳನ್ನು ಹೊಂದಿದ್ದ ಅಥಿರಾ ಒಂದು ರೀತಿಯಲ್ಲಿ ಟಿಕ್ ಟಾಕ್ ಸ್ಟಾರ್ ಆಗಿದ್ದರು.

ಹಾಫ್ ಚಿತ್ರಕ್ಕೆ ಆಡಿಷನ್ ಮೂಲಕ ಸೆಲೆಕ್ಟ್ ಆದ ಅಥಿರಾ ಬಗ್ಗೆ ನಿರ್ದೇಶಕ ಲೋಕೇಂದ್ರ ಸೂರ್ಯ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಮ್ಮ ಸಿನಿಮಾಗೆ ಸ್ಕೂಲ್ ಸ್ಟೂಡೆಂಟ್ ಕ್ಯಾರೆಕ್ಟರಿನ ನಾಯಕನಟಿ ಬೇಕಿತ್ತು. ಆಷಿಷನ್ನಿನಲ್ಲಿ ಅಥಿರಾ ಭಾವಾಭಿವ್ಯಕ್ತಿಯನ್ನು ನೋಡಿ ಸೆಲೆಕ್ಟ್ ಮಾಡಿಕೊಂಡೆ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಈಕೆಯ ನಟನೆಯ ಕೌಶಲ್ಯ ನೋಡಿ ಇಡೀ ಚಿತ್ರತಂಡ ಬೆರಗಾಗಿದ್ದಿದೆ.

ಈಗ ಚಿತ್ರೀಕರಣಗೊಂಡಿರುವ ದೃಶ್ಯಗಳನ್ನು ನೋಡುತ್ತಿದ್ದರೆ, ನಿಜಕ್ಕೂ ಈಕೆ ಉತ್ತಮ ಕಲಾವಿದೆಯಾಗಿ ಹೊರಹೊಮ್ಮುತ್ತಾರೆ ಎನ್ನುವ ಎಲ್ಲ ಲಕ್ಷಣಗಳೂ ಕಾಣುತ್ತಿವೆʼʼ ಎಂದಿದ್ದಾರೆ. ಸದ್ಯ ಅಥಿರಾಳ ಪೋಸ್ಟರನ್ನು ಹಾಫ್ ಚಿತ್ರತಂಡ ಬಿಡುಗಡೆ ಮಾಡಿದೆ. ʻಹಾಫ್ ಸಿನಿಮಾ ನನ್ನ ಪಾಲಿಗೆ ಸಿಕ್ಕಿದ್ದೇ ಅದೃಷ್ಟ ಅಂದುಕೊಂಡಿದ್ದೇನೆ.

ನಿರ್ದೇಶಕ ಲೋಕೇಂದ್ರ ಸೂರ್ಯ ಪ್ರತಿಯೊಂದು ದೃಶ್ಯವನ್ನೂ ಮಾಡಿ ತೋರಿಸುತ್ತಿದ್ದರು. ಈ ಚಿತ್ರದಲ್ಲಿ ಅದ್ಭುತವಾದ ಪಾತ್ರ ನನ್ನದು. ಸಿನಿಮಾ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನನಗೆ ಯಾವ ತಕರಾರೂ ಇಲ್ಲ.ʼ ಅನ್ನೋದು ನಟಿ ಅಥಿರಾ ಮಾತು.

ವರ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ʻರೆಡ್ ಅಂಡ್ ವೈಟ್ ಮ್ಯಾನ್ʼ ಎಂದು ದಾಖಲೆ ನಿರ್ಮಿಸಿರುವ ರೆಡ್ ಅಂಡ್ ವೈಟ್ ಸವೆನ್ ರಾಜ್ ಮತ್ತು ರಾಜು ಕಲ್ಕುಣಿ ಖಳನಟರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಪವಿತ್ರ ಆರ್. ಪ್ರಭಾಕರ್ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿಯೂ ಅಭಿನಯಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಬಿ.ಆರ್. ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ, ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಪವಿತ್ರಾ ಆರ್. ಪ್ರಭಾಕರ್ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್, ಮೋಹನ್ ನೆನಪಿರಲಿ ಮುಂತಾದವರ ತಾರಾಗಣವಿದೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನ, ಕಲೆ ಶಿವಕಾಂತ್, ಪ್ರಚಾರಕಲೆ : ಮಾಬಸಕಿ (ಕಿರಣ್), ಎಂ.ಜಿ. ಕಲ್ಲೇಶ್ ಪತ್ರಿಕಾಸಂಪರ್ಕವಿದೆ.

Related posts