Cini Reviews Cinisuddi Fresh Cini News 

ಹೆಣ್ಣಿನ ರಕ್ಷಣೆಗಾಗಿ “ಅಸುರ ಸಂಹಾರ” ( ಚಿತ್ರ ವಿಮರ್ಶೆ – ರೇಟಿಂಗ್ : 3/5 )

ಚಿತ್ರ : ಅಸುರ ಸಂಹಾರ ನಿರ್ದೇಶಕ : ಪ್ರದೀಪ್ ನಿರ್ಮಾಪಕ : ಹರಿಪ್ರಸಾದ್ ಸಂಗೀತ : ಲೋಕಿ
ಛಾಯಾಗ್ರಾಹಕ : ಪ್ರವೀಣ್ ಶೆಟ್ಟಿ
ತಾರಾಗಣ : ಹರಿಪ್ರಸಾದ್, ಹರ್ಷಲ ಹನಿ , ದೀಕ್ಷಾ ಶೆಟ್ಟಿ , ವಿನಯ್, ಶಿವು ಬಾಲಾಜಿ ಹಾಗೂ ಮುಂತಾದವರು…

ನಾವು ಸ್ತ್ರೀಯರನ್ನು ದೇವರು, ತಾಯಿ, ಭಾರತಾಂಬೆಗೆ ಹೋಲಿಸುತ್ತೇವೆ. ಅಂತಹ ಹೆಣ್ಣಿನ ಬಗ್ಗೆ ಪ್ರತಿಯೊಬ್ಬರು ಸಮಾಜದಲ್ಲಿ ಗೌರವಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುವುದಿರಲಿ, ಅವರನ್ನು ನೆಮ್ಮದಿಯಾಗಿ ಬದುಕಲು ಬಿಡುವುದೇ ಸಾಧ್ಯವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕುರಿತಂತೆ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ , ದೌರ್ಜನಕ್ಕೆ ಸಂಬಂಧಪಟ್ಟಂತೆ ಈ ವಾರ ತೆರೆಯ ಮೇಲೆ ಬoದಿರುವ ಚಿತ್ರವೇ ಅಸುರ ಸಂಹಾರ.

ಚಿತ್ರದ ಕಥಾ ಹಂದರದ ಪ್ರಕಾರ , ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆಗೆ ಮುಕ್ತಿ ಸಿಗಬೇಕು. ಕಾನೂನು ಅದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ಇಂತಹ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂಬ ವಿಚಾರವನ್ನು ಬಹಳ ಸೂಕ್ಷ್ಮವಾಗಿ ತೆರೆಯ ಮೇಲೆ ತರುವುದರಲ್ಲಿ ತಂಡ ಮುಂದಾಗಿದೆ. ಈ ಒಂದು ಚಿತ್ರದಲ್ಲಿ ಎಲ್ಲೂ ಅಶ್ಲೀಲತೆಯನ್ನು ವೈಭವೀಕರಿಸದೆ, ರಕ್ತಪಾತ ತೋರಿಸದೆ. ಬಹಳ ಅರ್ಥಪೂರ್ಣವಾಗಿ ಚಿತ್ರಕಥೆಯನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ರೀತಿ ಸಮಾಜಕ್ಕೆ ಮಾದರಿ ಆಗುವಂತಹ ಅಂಶವನ್ನು ಒಳಗೊಂಡಿದೆ.

ಯುವ ನಿರ್ದೇಶಕ ಪ್ರದೀಪ್ ತಮ್ಮ ಪ್ರಥಮ ಚಿತ್ರದಲ್ಲೇ ಒಂದು ಅಚ್ಚುಕಟ್ಟಾದ ಕಥೆಯನ್ನು ಆಯ್ಕೆ ಮಾಡಿಕೊಂಡು, ಅದನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಹೆಣ್ಣಿನ ಬಗ್ಗೆ ಹೇಳಿರುವ ಅವರ ಕಾಳಜಿ, ಇದಕ್ಕೆ ಸಿಗಬೇಕಾಗಿರುವ ಪರಿಹಾರಗಳ ವಿಚಾರಗಳು ಗಮನಾರ್ಹವಾಗಿದ್ದು , ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರು ಮುಂದೆ ಒಬ್ಬ ಭರವಸೆಯ ನಿರ್ದೇಶಕ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಇಂತಹ ಚಿತ್ರ ಮಾಡಲು ನಿರ್ಮಾಪಕರು ಸ್ವಲ್ಪ ಹಿಂದೆ ಸರಿಯುವುದು ಸಹಜವೇ. ಆದರೆ ನಿರ್ಮಾಪಕ ಹರಿಪ್ರಸಾದ್ ಈ ಅಸುರ ಸಂಹಾರ ಚಿತ್ರವನ್ನು ನಿರ್ಮಿಸುವ ಜೊತೆಗೆ ನಟನೆ ಮಾಡುವ ಮೂಲಕ ಬೆಳ್ಳಿಪರದೆಯಲ್ಲಿ ಗಮನ ಸೆಳೆದಿದ್ದಾರೆ. ಒಬ್ಬ ಫೋಟೊಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕ ಹರಿಪ್ರಸಾದ್ ತಂಗಿಯ ಮುದ್ದಿನ ಅಣ್ಣನಾಗಿ ಕೂಡ ಗಮನ ಸೆಳೆಯುತ್ತಾರೆ.

ಇನ್ನು ನಾಯಕಿ ಪಾತ್ರ ಮಾಡಿರುವ ಹರ್ಷಲ ಕೂಡ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.ಉಳಿದಂತೆ ಬರುವ ಕಾಮಿಡಿ ಪಾತ್ರಧಾರಿ ರವಿ ಕೂಡ ಉತ್ತಮವಾಗಿ ಅಭಿನಯಿಸಿದ್ದು , ಇನ್ನು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ವಿನಯ್ ಹಾಗೂ ಶಿವು ಬಾಲಾಜಿ ಕೂಡ ಗಮನ ಸೆಳೆಯುತ್ತಾರೆ. ಹಾಗೆಯೇ ಸಂಗೀತ ನಿರ್ದೇಶಕ ಲೋಕಿ ಅವರ ಕೆಲಸ ಗಮನಾರ್ಹವಾಗಿದೆ. ಅದೇ ರೀತಿ ಛಾಯಾಗ್ರಾಹಕ ಪ್ರವೀಣ್ ಶೆಟ್ಟಿ ಕೂಡ ತಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ.

ಚಿತ್ರದ ಓಟ ನಿಧಾನಗತಿಯಾಗಿದ್ದು ಮತ್ತಷ್ಟು ಬಿಗಿಯಾಗಿದ್ದರೆ ಚೆನ್ನಾಗಿರುತ್ತಿತ್ತು. ಇಡೀ ತಂಡ ಬಹಳಷ್ಟು ಶ್ರಮವಹಿಸಿ ಜನರ ಗಮನ ಸೆಳೆಯುವಂತಹ ಚಿತ್ರ ಮಾಡಿದ್ದಾರೆ. ಈ ಅಸುರ ಸಂಹಾರ ಚಿತ್ರವನ್ನು ಎಲ್ಲರೂ ಒಮ್ಮೆ ಹೋಗಿ ನೋಡಬಹುದಾಗಿದೆ.

Share This With Your Friends

Related posts