Cinisuddi Fresh Cini News 

ಬಿಗ್ ಬಜೆಟ್ ನಲ್ಲಿ “ಅಶ್ವ” ತಯಾರಿ.

ಬೆಳ್ಳಿ ಪರದೆ ಮೇಲೆ ಬಹಳಷ್ಟು ಯುವ ಪ್ರತಿಭೆಗಳು ತಮ್ಮ ಅದೃಷ್ಟದ ಪರೀಕ್ಷೆಗೆ ಬರ್ತಿದ್ದಾರೆ. ಆ ನಿಟ್ಟಿನಲ್ಲಿ ಬಜೆಟ್ ವೆಚ್ಚದಲ್ಲಿ ಹೊಸಬರ “ಅಶ್ವ” ಚಿತ್ರವೊಂದು ಸೆಟ್ಟೇರುತ್ತಿದೆ. ಪ್ರಚಾರದ ಸಲುವಾಗಿ ಟೀಸರ್, ಪೋಸ್ಟರ್ ರಿಲೀಸ್, ಮೇಕಿಂಗ್ ತೋರಿಸುವುದು ಸಾಮಾನ್ಯವಾಗಿದೆ.

ಆದರೆ ಸ್ಯಾಂಡಲ್‌ವುಡ್‌ದಲ್ಲಿ ಮೊದಲು ಎನ್ನುವಂತೆ ’ಅಶ್ವ’ ಸಿನಿಮಾವು ಯಾವ ರೀತಿ ಮೂಡಿಬರಲಿದೆ ಎಂದು 25 ನಿಮಿಷದ ’ಪ್ರೀಮಿಯರ್ ಷೋ ರೀಲ್ಸ್’ ಕಾರ್ಯಕ್ರಮ ಜರುಗಿತು. ಮಸ್ತ್ ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಪ್ರೀತಿ, ತುಂಟಾಟ ಎಲ್ಲವು ಇದರಲ್ಲಿ ಕಾಣಿಸಿಕೊಂಡಿತು. ಇವಿಷ್ಟು ಕತೆಯಲ್ಲಿ ಶೇಕಡ ಎರಡರಷ್ಟು ಮಾತ್ರ ಬರಲಿದ್ದು, ಚಿತ್ರವು ಬೇರೆ ರೀತಿಯಲ್ಲಿ ಇರುತ್ತದಂತೆ.

ಒಂದು ದಶಕದ ಕಾಲ ಸಾಕಷ್ಟು ಚಿತ್ರಗಳಿಗೆ ಮಾತುಗಳನ್ನು ಪೋಣಿಸಿದ್ದ ಎ.ಆರ್.ಸಾಯಿರಾಮ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಇವರನ್ನು ನಂಬಿಕೊಂಡು ಕೋಲಾರ ಕೇಶವ-ಹೇಮಲತಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಕೆ.ಕೆ.ಎಂಟರ್‌ಟೈನ್‌ಮೆಂಟ್ಸ್ ಮತ್ತು ಸೂಪರ್‌ನೋವ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿ ಸಿದ್ದಗೊಳ್ಳುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಅರ್ಪಿಸುತ್ತಿರುವುದು ಮತ್ತೋಂದು ಹಿರಿಮೆಯಾಗಿದೆ.

ಯುವ ನಟ ವಿವನ್.ಕೆ.ಕೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ನಾಯಕಿಗಾಗಿ ಶೋಧ ನಡೆಯತ್ತಿದೆ. ತಾರಗಣದಲ್ಲಿ ಸುಹಾಸಿನಿ, ಸಾಯಿಕುಮಾರ್, ಪ್ರಕಾಶ್‌ರೈ, ಸಾಧುಕೋಕಿಲ, ರಂಗಾಯಣರಘು, ಭವಾನಿಪ್ರಕಾಶ್, ಚಿಕ್ಕಣ್ಣ, ಗಿರಿ, ನಂದಗೋಪಾಲ್, ನಾಗೇಂದ್ರಅರಸ್, ಬಲರಾಜವಾಡಿ, ಯಶ್‌ಶೆಟ್ಟಿ, ಪವನ್‌ಪಚ್ಚಿ, ರಿಚ್ಚಿ ಮುಂತಾದವರು ನಟಿಸುತ್ತಿದ್ದಾರೆ. ಯೋಗರಾಜಭಟ್, ಜಯಂತ್‌ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್, ಭರ್ಜರಿಚೇತನ್ ಸಾಹಿತ್ಯದ ಹಾಡುಗಳಿಗೆ ಬಿ.ಅಜನೀಶ್‌ ಲೋಕನಾಥ್ ಸಂಗೀತವಿದೆ.

ರವಿಕುಮಾರ್‌ಸನ ಛಾಯಾಗ್ರಹಣ, ಶ್ರೀಕಾಂತ್‌ಗೌಡ ಸಂಕಲನ, ರವಿವರ್ಮ-ಪೀಟರ್‌ಹನ್ಸ್-ವಿಕ್ರಂ-ಕುಂಗುಫುಚಂದ್ರು ಸಾಹಸ, ಜಾನಿ-ಶೇಖರ್-ಧನಂಜಯ್ ನೃತ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಸಕಲೇಶಪುರ, ಮಂಗಳೂರು, ಅಮೃತಸರ, ಪಣಜಿ, ಹೈದರಬಾದ್ ಮತ್ತು ಕಾಕಿನಾಡದ ಸುಂದರ ತಾಣಗಳಲ್ಲಿ ನವೆಂಬರ್ ಕೊನೆವಾರದಿಂದ ಚಿತ್ರೀಕರಣ ನಡೆಸಲು ತಂಡವು ತಯಾರಿ ಮಾಡಿಕೊಳ್ಳುತ್ತಿದೆ.

Related posts