Cinisuddi Fresh Cini News 

ಕಾಶ್ಮೀರದಲ್ಲಿ “ಆರ್ಟಿಕಲ್ 370” ಕ್ಲೈಮ್ಯಾಕ್ಸ್ ಶೂಟಿಂಗ್

ಈ ಹಿಂದೆ ಮುಕ್ತಿ ಎಂಬ ಚಿತ್ರ ನಿರ್ದೇಶಿಸಿದ್ದ ಕೆ. ಶಂಕರ್ ಈಗ ದೇಶಪ್ರೇಮ ಸಾರುವ ಕಥಾಹಂದರ ಇಟ್ಟುಕೊಂಡು ಹೊಸ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಆರ್ಟಿಕಲ್ 370(ವಿಧಿ 370)ಎನ್ನುವ ಶೀರ್ಷಿಕೆ ಹೊಂದಿರುವ ಈ ಚಿತ್ರದಲ್ಲಿ ಹಿರಿಯನಟ ಶಶಿಕುಮಾರ್ ಒಬ್ಬ ಮಿಲಿಟರಿ ಆಫೀಸರ್ ಆಗಿಯೂ, ಹಿರಿಯ ನಟಿ ಶೃತಿ ಅವರ ಪತ್ನಿಯಾಗಿಯೂ ನಟಿಸಿದ್ದಾರೆ.

ನಮ್ಮ ವೈರಿ ದೇಶವೊಂದು ಕಾಶ್ಮೀರದಲ್ಲಿರುವ ನಮ್ಮದೇ ಅಮಾಯಕ ಜನರನ್ನು ಬಳಸಿಕೊಂಡು ನಮ್ಮ ದೇಶದ ಮೇಲೇ ಯುದ್ದವನ್ನು ಸಾರುವ, ಅವರ ವಿರುದ್ದ ನಮ್ಮ ಸೈನಿಕರು ಹೋರಾಡಿ ಗೆಲುವು ಸಾಧಿಸುವ ಕಥಾನಕ ಈ ಚಿತ್ರದಲ್ಲಿದ್ದು, ವೈರಿ ದೇಶದ ಮೇಲೆ ಸಮರಸಾರಿ ಹೋರಾಡುವ ಕೊಡಗಿನ ಕಲಿ ಮೇಜರ್ ಸುಶೀಲ್‌ಕುಮಾರ್ ಪಾತ್ರದಲ್ಲಿ ಹಿರಿಯನಟ
ಶಶಿಕುಮಾರ್ ಅವರು ಕಾಣಿಸಿಕೊಂಡಿದ್ದಾರೆ.

ನಾಯಕನ ತಂದೆಯ ಪಾತ್ರದಲ್ಲಿ ಹಿರಿಯ ನಟ ಶಿವರಾಮಣ್ಣ ನಟಿಸಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ ಸುಮಾರು 50 ದಿನಗಳ ಕಾಲ ಮಡಿಕೇರಿ, ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಶ್ರವಣಬೆಳಗೊಳದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಕಾಶ್ಮೀರದಲ್ಲಿ ನಡೆಸಬೇಕಿರುವ ಐದಾರು ದಿನಗಳ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮಾತ್ರವೇ ಬಾಕಿಯಿದೆ.

ಮುಂದಿನ ತಿಂಗಳು ಅಂದರೆ ಫೆಬ್ರವರಿ 14ರಿಂದ ಕಾಶ್ಮೀರದಲ್ಲಿ ಬಾಕಿ ಉಳಿದ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಆರ್ಟಿಕಲ್ 370 ಚಿತ್ರದಲ್ಲಿ ಕೇವಲ 2 ಹಾಡುಗಳಿದ್ದು, ಯುಗಂತ್ ಇಲ್ಲಿ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ರವಿ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ.

ಲೈರಾ ಎಂಟರ್‌ ಟೈನ್‌ಮೆಂಟ್ ಅಂಡ್ ಮೀಡಿಯಾ ಮೂಲಕ ನಿರ್ದೇಶಕರ ಸ್ನೇಹಿತರೂ ಆದ ಭರತ್‌ಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಕೆ.ಶಂಕರ್ ಅವರೇ ರಚಿಸಿದ್ದಾರೆ.

ಉಳಿದಂತೆ ಸಂಜೀವರೆಡ್ಡಿ ಅವರ ಸಂಕಲನ, ವೇಲು ಅವರ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಸಾಹಿತಿ ದೊಡ್ಡ ರಂಗೇಗೌಡರು, ಗಣೇಶ್‌ರಾವ್ ಕೇಸರಕರ್, ರಮಾನಂದ್, ವೆಂಕಟೇಶ್, ಲಕ್ಷ್ಮಣ, ಕಿಲ್ಲರ್ ವೆಂಕಟೇಶ್, ಅವಿನಾಶ್, ರಘುರಂಜನ್ ಚಿತ್ರದ ಉಳಿದ ತಾರಾಗಣದಲ್ಲಿ ನಟಿಸಿದ್ದಾರೆ.

Related posts