Cini Reviews Cinisuddi Fresh Cini News 

ಲವ್, ಥ್ರಿಲ್ಲರ್, ಮರ್ಡರ್ ಮಿಸ್ಟರಿಯ ‘ಅಮೃತ ಅಪಾರ್ಟ್ ಮೆಂಟ್ಸ್’ (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5
ಚಿತ್ರ : ಅಮೃತ ಅಪಾರ್ಟ್ ಮೆಂಟ್ಸ್
ನಿರ್ದೇಶನ : ಗುರುರಾಜ್ ಕುಲಕರ್ಣಿ
ನಿರ್ಮಾಪಕ : ಗುರುರಾಜ್ ಕುಲಕರ್ಣಿ
ಸಂಗೀತ : ಎಸ್.ಡಿ. ಅರವಿಂದ್
ಛಾಯಾಗ್ರಹಣ : ಅರ್ಜುನ್ ಅಜಿತ್
ತಾರಾಗಣ : ತಾರಕ್ ಪೊನ್ನಪ್ಪ , ಊರ್ವಶಿ ಗೋವರ್ಧನ್ , ಬಾಲಾಜಿ ಮನೋಹರ್ , ಮಾನಸ ಜೋಷಿ , ಸೀತಾ ಕೋಟೆ , ಸಂಪತ್ ಕುಮಾರ್ ಹಾಗೂ ಮುಂತಾದವರು…

ಇವತ್ತಿನ ಯಾಂತ್ರಿಕ ಬದುಕು , ಪ್ರತಿಯೊಬ್ಬ ನಾಗರೀಕರ ಜೀವನದ ಶೈಲಿಯನ್ನು ಬೇರೆಯದೇ ರೀತಿಯಲ್ಲಿ ರೂಪಿಸುತ್ತಿದೆ. ಆ ನಿಟ್ಟಿನಲ್ಲಿ ಬಹಳಷ್ಟು ಸೂಕ್ಷ್ಮವಾಗಿ ನಿರ್ದೇಶಕ ಗುರುರಾಜ್ ಕುಲಕರ್ಣಿ ನಾಡಗೌಡ ಅವರು ಇದನ್ನು ಗಮನಿಸಿ , ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಅಮೃತ ಅಪಾರ್ಟ್ ಮೆಂಟ್ಸ್ ಚಿತ್ರ ಈ ವಾರ ಬಿಡುಗಡೆಯಾಗಿದ್ದು, ಇದೊಂದು ಸಸ್ಪೆನ್ಸ್ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ನಗರಗಳಲ್ಲಿ ಯಾಂತ್ರಿಕ ಬದುಕು ಸಾಗಿಸುತ್ತಿರುವ ಐಟಿಬಿಟಿ ಉದ್ಯೋಗಿಗಳ ಬದುಕು, ಬವಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟಿದ್ದಾರೆ. ಅವರದೇ ಚಿತ್ರಕಥೆಯ ಜೊತೆಗೆ ದಕ್ಷ ನಿರ್ದೇಶನವೂ ಇದ್ದು, ಅಮೃತ ಅಪಾರ್ಟ್ ಮೆಂಟ್ಸ್ ಒಂದು ಸದಭಿರುಚಿಯ ಚಿತ್ರವಾಗಿಸಿದೆ.

ಯಾಂತ್ರಿಕ ಬದುಕಿನಲ್ಲಿ ಒಡೆದು ಹೋದ ಮನಗಳನ್ನು ಒಂದುಗೂಡಿಸುವ ಪ್ರಯತ್ನವೂ ಇಲ್ಲಿದೆ. ಒಂದು ಕೊಲೆ, ಮತ್ತೊಂದು ಕೊಲೆಯ ಸುತ್ತ ಸಾಗುವ ಈ ಚಿತ್ರ ಸಾಕಷ್ಟು ಥ್ರಿಲ್ಲರ್ ಎಲಿಮೆಂಟ್‍ಗಳನ್ನು ಒಳಗೊಂಡಿದೆ. ಚಿತ್ರದ ಆರಂಭದಲ್ಲೇ ಬರುವ ತಮ್ಮ ಬದುಕು ಕಟ್ಟಿಕೊಳ್ಳಲು ಎಲ್ಲಿಂದಲೋ ಬೆಂಗಳೂರಿಗೆ ಬರುವ ವಲಸಿಗರ ಕುರಿತಾದ ನಾವು ಬಂದೇವಾ ಎನ್ನುವ ಹಾಡು ನೋಡುಗರನ್ನು, ಅದರಲ್ಲೂ ಬೆಂಗಳೂರಿಗರನ್ನು ಭಾವನಾಲೋಕಕ್ಕೇ ಕೊಂಡೊಯ್ಯುತ್ತದೆ.

ಪ್ರೀತಿಸಿ ಮದುವೆಯಾದ ಮೈಸೂರು ಮೂಲದ ವಾಸು(ತಾರಕ್‍ಪೊನ್ನಪ್ಪ) ಬೆಂಗಾಳಿ ಯುವತಿ ಸಪ್ನ(ಊರ್ವಶಿ ಗೋವರ್ಧನ್) ದಂಪತಿಗಳು ಅಮೃತ ಅಪಾರ್ಟ್‍ಮೆಂಟ್‍ನಲ್ಲಿ ಸಂಸಾರ ಹೂಡಿರುತ್ತಾರೆ, ದಿನಗಳೆದಂತೆ ಆ ದಂಪತಿಗಳ ಸಂಸಾರದಲ್ಲಿ ಸಾಮರಸ್ಯ ಕಡಿಮೆಯಾಗಿ ಇಬ್ಬರೂ ವಿಚ್ಛೇದನಕ್ಕೆ ಮುಂದಾಗುತ್ತಾರೆ, ಅದೇ ಸಂದರ್ಭದಲ್ಲಿ ಅವರಿದ್ದ ಮನೆಯಲ್ಲಿ, ಅವರಿಲ್ಲದ ಸಮಯದಲ್ಲಿ ಒಬ್ಬ ವ್ಯಕ್ತಿಯ ಕೊಲೆ ನಡೆದುಹೋಗುತ್ತದೆ, ಅದರಿಂದ ಇವರಿಬ್ಬರೂ ವಿಚಲಿತರಾಗುತ್ತಾರೆ.

ಆ ಕೊಲೆಯನ್ನು ಮುಚ್ಚಿಡಲು ಹೋಗಿ ಆ ದಂಪತಿಗಳು ಏನೆಲ್ಲ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ, ಅಲ್ಲದೆ ಆನಂತರದಲ್ಲಿ ಅಪಾರ್ಟ್‍ಮೆಂಟ್‍ನ ಸೆಕ್ಯೂರಿಟಿ ಗಾರ್ಡ್ ಕೂಡ ಕೊಲೆಯಾಗುತ್ತಾನೆ. ಅಮೃತ ಅಪಾರ್ಟ್‍ಮೆಂಟ್‍ನ ಒಳಗೆ, ಹೊರಗೆ ನಡೆಯುವ ಆ ಎರಡೂ ಕೊಲೆಗಳಿಗೂ ಏನಾದರೂ ಸಂಬಂಭವಿದೆಯಾ… ಈ ದಂಪತಿಗಳ ಮನೆಯಲ್ಲೇ ಆ ಕೊಲೆ ನಡೆದ ಉದೇಶವೇನು… ಅವರಿಬ್ಬರೂ ಈ ಸಂಕಷ್ಟದಿಂದ ಹೇಗೆ ಹೊರಬರುತ್ತಾರಾ… ಅವರಿಬ್ಬರಿಗೂ ವಿಚ್ಚೇದನ ದೊರೆಯಿತೇ… ಎಂಬುದನ್ನು ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ ಅಮೃತ ಅಪಾರ್ಟ್ಮೆಂಟ್ಸ್ ಚಿತ್ರವನ್ನ ನೋಡಲೇಬೇಕು.

ನಿರ್ದೇಶಕ ಗುರುರಾಜ್ ಕುಲಕರ್ಣಿ ನಾಡಗೌಡ ಅವರು ಕುತೂಹಲಕರವಾಗಿ ಚಿತ್ರವನ್ನು ನಿರೂಪಿಸಿಕೊಂಡು ಹೋಗಿದ್ದಾರೆ. ಚಿತ್ರ ಆರಂಭವಾದಾಗಿನಿಂದ ಪ್ರತಿ ದೃಶ್ಯದಲ್ಲೂ ಅಸಕ್ತಿ ಕೆರಳಿಸುತ್ತಲೇ ಸಾಗುವಂತೆ ನೋಡಿಕೊಂಡಿದ್ದಾರೆ. ಹಾಗೆಯೇ ಒಂದಿಷ್ಟು ಪಾತ್ರಪೋಷಣೆಯನ್ನ ಮತ್ತಷ್ಟು ಬಿಗಿ ಮಾಡಬಹುದಿತ್ತು.

ಚಿತ್ರವು ನೋಡುಗರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಕೊಲೆಯ ತನಿಖೆ ಸಮಯದಲ್ಲಿ ಸಂಬಂಧಗಳ ಮಹತ್ವ ಏನೆಂಬುದರ ಅರಿವು ಆ ದಂಪತಿಗಳಿಗಾಗುತ್ತದೆ. ಅಮೃತ ಅಪಾರ್ಟ್‍ಮೆಂಟ್ಸ್ ಕಥೆಗೆ ತಕ್ಕಂತೆ ಪಾತ್ರಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಹಳೇ ಹಿಂದಿ ಚಿತ್ರಗೀತೆಗಳನ್ನು ಚಿತ್ರದ ಬಹುತೇಕ ಸೀನ್‍ಗಳ ಹಿನ್ನೆಲೆಯಲ್ಲಿ ಬಳಸಿದ್ದಾರೆ.

ನಾಯಕ ತಾರಕ್ ಪೊನ್ನಪ್ಪ ಹಾಗೂ ನಾಯಕಿ ಊರ್ವಶಿ ಗೋವರ್ಧನ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಟ ಬಾಲಾಜಿ ಮನೋಹರ್ ಆಟೋ ಡ್ರೈವರ್ ಹಾಗೂ ಇನ್ಸಪೆಕ್ಟರ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಎಸಿಪಿ ರತ್ನಪ್ರಭ ಪಾತ್ರದಲ್ಲಿ ಮಾನಸಾ ಜೋಷಿ ಅವರು ಖಡಕ್ ಅಭಿನಯ ನೀಡಿದ್ದಾರೆ. ದಂಪತಿಗಳಿಗೆ ಬುದ್ದಿವಾದ ಹೇಳುವ ವಕೀಲೆಯಾಗಿ ಸೀತಾ ಕೋಟೆ ಗಮನ ಸೆಳೆಯುತ್ತಾರೆ.

ಇಂದಿನ ಯುವಕ, ಯುವತಿಯರ ಅಭಿರುಚಿಗೆ ತಕ್ಕಂತೆ ಎಸ್.ಡಿ. ಅರವಿಂದ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ಅರ್ಜುನ್ ಅಜಿತ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ಹೊಸ ರೂಪವನ್ನೇ ನೀಡಿದೆ. ಒಟ್ಟಾರೆ ಒಂದು ವಿಭಿನ್ನ ಪ್ರಯತ್ನ ಮಾಡಿರುವ ಅಮೃತ ಅಪಾರ್ಟ್ ಮೆಂಟ್ಸ್ ಚಿತ್ರವನ್ನು ಎಲ್ಲರೂ ಹೋಗಿ ಒಮ್ಮೆ ವೀಕ್ಷಿಸಬಹುದಾಗಿದೆ.

Related posts