Cinisuddi Fresh Cini News 

ಅಂಬಿಗೆ ಇನ್ನೂ ವಯಸ್ಸಾಗಿಲ್ಲ, ಸುದೀಪ್‍ಗೆ ಉತ್ಸಾಹ ಕುಗ್ಗಿಲ್ಲ

ರೆಬೆಲ್‍ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅವರು ನಟಿಸಿರುವ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೊದಲ ಪತ್ರಿಕಾಗೋಷ್ಠಿಯನ್ನು ಮೊನ್ನೆ ರ್ಯಾಡಿಸನ್ ಬ್ಲೂ (ಏಟ್ರಿಯಾ) ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾಕ್‍ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶಿಸಿರುವ ಈ ಚಿತ್ರದ ಬಗ್ಗೆ ಅಂಬರೀಷ್ ಅವರು ಪ್ರಶಂಸಿಸಿದರು. ಮೊನ್ನೆ ಈ ಚಿತ್ರದ ಡಬಿಂಗ್ ಮಾಡಿ ಮುಗಿಸಿದ ಅಂಬಿ ಚಿತ್ರವನ್ನು ವೀಕ್ಷಿಸಿ ಅಂಬಿ ಖುಷ್ ಹುವಾ ಎಂದರಲ್ಲದೆ, ಚಿತ್ರದ ಪಾಲುದಾರ ನಿರ್ಮಾಪಕರಾದ ಸುದೀಪ್‍ರವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಈ ಚಿತ್ರದ ಮೂಲ ಚಿತ್ತರವಾದ ಪಾ ಪಾಂಡಿಯನ್ನು ನೋಡಿದಾಗ ಖುಷಿ ಆಯಿತು, ಅಲ್ಲದೆ ಈ ಚಿತ್ರಕ್ಕೆ ಸುದೀಪ್ ಪಾಲುದಾರ ಎಂದಾಗ ಖುಷಿಯಿಂದ ಒಪ್ಪಿಕೊಂಡೆ.

ನಿರ್ದೇಶಕ ಗುರುದತ್ ಗಾಣಿಗ ಅವರು ಹೊಸಬರಾದರೂ ಕೆಲವು ಸೆನ್ಸಿಟಿವ್‍ಸೀನ್‍ಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ, ನಾಗರಹಾವು ಚಿತ್ರದಲ್ಲಿ ಕೇವಲ 500 ರೂ ಪಡೆದು ನಟಿಸಿದ ನಾನು ಹೀರೋ ಆದರೆ. ಹಾಗೆ ಯಾರನ್ನೂ ಅವರ ಅನುಭವ ಹಾಗೂ ಆಕಾರದ ಮೇಲೆ ಅಳೆಯಬಾರದು ಎಂದು ಹೇಳಿದರು. ನಾನು ಈ ಚಿತ್ರದಲ್ಲಿ ಬರೀ ನಟನೆ ಮಾಡಿದ್ದೀನಿ. ಆದರೆ, ಸುದೀಪ್ ಅವರೇ ಈ ಚಿತ್ರದ ನಿಜವಾದ ಬ್ಯಾಕ್‍ಬೋನ್. ಇಲ್ಲಿ ನನಗಿಂತ ಅವನ ಪಾಲು ಜಾಸ್ತಿ ಇದೆ. ತೆರೆಯ ಮೇಲೆ ಅವನು ಕಾಣಿಸಿಕೊಳ್ಳುವುದು ಬರೀ ಅರ್ಧ ಗಂಟೆಯಾದರೂ, ತೆರೆಯ ಹಿಂದೆ ಆತ ಸಾಕಷ್ಟು ಕೆಲಸಗಳನ್ನು ಮಾಡಿದ್ದಾನೆ. ಬಾಂಬೆ, ಹೈದ್ರಾಬಾದ್ ಅಂತ ಹಗಲು ರಾತ್ರಿಯೆನ್ನದೆ ಬಿಡುವಿಲ್ಲದಂತೆ ಓಡಾಡಿದರೂ ಈ ಚಿತ್ರದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾನೆ. ಸಿನಿಮಾ ಬಿಟ್ಟರೆ ಅವನ ಹತ್ತಿರ ಬೇರೆ ವಿಷಯ ಮಾತಾಡೋದೇ ಕಷ್ಟ. ಅಂಥ ಹಾರ್ಡ್‍ವರ್ಕರ್ ಎಂದು ಸುದೀಪ್ ಅವರನ್ನು ಹೊಗಳಿದರು.

ಕಿಚ್ಚ ಸುದೀಪ್ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದು 22 ವರ್ಷಗಳಾದವು. ಸುದೀಪ್ ಅವರು ನಟಿಸಿದ್ದ ಮೊದಲ ಚಿತ್ರವಾದ ಬ್ರಹ್ಮ ಚಿತ್ರದ ಮುಹೂರ್ತವೂ ಏಟ್ರಿಯ ಹೊಟೇಲ್‍ನಲ್ಲೇ ಆಗಿತ್ತಾದರೂ ಆ ಚಿತ್ರ ಸೆಟ್ಟೇರಲೇ ಇಲ್ಲ. ಆದರೆ ಈಗ ಅದೇ ಹೊಟೇಲ್ ಅಂಬಿ ನಿಂಗೇ ವಯಸ್ಸಾಯ್ತೋ ಎಂಬ ಚಿತ್ರದ ಪ್ರೆಸ್‍ಮೀಟ್ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಈಗಾಗಲೇ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಮಂಜುನಾಥ್ ಅವರು ಇದೇ ಸಮಯದಲ್ಲಿ ಪ್ರಕಟಿಸಿದರು. ಕಿಚ್ಚ ಸುದೀಪ್, ಅಂಬರೀಶ್, ಶ್ರುತಿ ಹರಿಹರನ್, ಸುಹಾಸಿನಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಗುರುದತ್ ಗಾಣಿಗ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ 10 ರಂದು ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆಯಲಿದ್ದುಘಿ, ಕನ್ನಡ ಚಿತ್ರರಂಗದ ತಾರೆಯರು ಮಾತ್ರವಲ್ಲದೆ ರಜನಿಕಾಂತ್ ಸಮಾರಂಭಕ್ಕೆ ಬರುವ ಸಾಧ್ಯತೆ ಇದೆಯಾದರೂ ಮೂಲಕ ಚಿತ್ರದ ನಾಯಕನಾದ ಧನುಷ್ ಬರುವುದಂತೂ ಗ್ಯಾರಂಟಿ.

Related posts