Cinisuddi Fresh Cini News 

ನೆರವಿನ ನಿರೀಕ್ಷೆಯಲ್ಲಿ ಹಿರಿಯ ನಟ ವಿಶ್ವನಾಥ್‍

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರ ಜೊತೆ ನಟಿಸಿದ್ದ ಬಹುಭಾಷಾ ನಟ, ಕನ್ನಡದ ಹಿರಿಯ ಕಲಾವಿದ ವಿಶ್ವನಾಥ್ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿಶ್ವನಾಥ್ ಅವರಿಗೆ ಚಿಕಿತ್ಸೆ ಕೊಡಿಸಲು ಹಣದ ಅವಶ್ಯಕತೆಯಿದೆ. ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದು, ಚಿತ್ರರಂಗದವರು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ಪಡುವಾರಹಳ್ಳಿ ಪಾಂಡವರು’ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ವಿಶ್ವನಾಥ್, ಆ ನಂತರ ಚಲಿಸುವ ಮೋಡಗಳು ಸೇರಿದಂತೆ ಡಾ. ರಾಜ್‍ಕುಮಾರ್ ಅವರ ಜೊತೆ ಐದು ಸಿನಿಮಾಗಳಲ್ಲಿ ನಟಿಸುವ ಮೂಲಕ ರಾಜ್‍ಕುಮಾರ್‍ರಿಂದ ವಿಶೇಷ ಮೆಚ್ಚುಗೆ ಪಡೆದಿದ್ದರು. ಕನ್ನಡ ಮಾತ್ರವಲ್ಲದೆ ತಮಿಳಿನಲ್ಲಿ ಕೆ.ಬಾಲಚಂದರ್ ಅವರ ಸಿನಿಮಾಗಳಲ್ಲಿ ಸಹ ವಿಶ್ವನಾಥ್ ನಟಿಸಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ, ನಾಗಾರ್ಜುನ ಅಭಿನಯದ ‘ಶಿವ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಧುಮೇಹದಿಂದ ಬಳಲುತ್ತಿರುವ ವಿಶ್ವನಾಥ್ ಅವರು ವಿಜಯನಗರದ ಬಿ.ಜಿ.ಎಸ್. ಆಸ್ಪತ್ರೆಯಲ್ಲಿ ಸುಮಾರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಕಾಲಿನ ಶಸ್ತ್ರ ಚಿಕಿತ್ಸೆ ಕೂಡ ಆಗಿದೆ. ಈಗ ಅವರ ಚಿಕಿತ್ಸೆಗೆ ಸಾಕಷ್ಟು ಹಣದ ಅಗತ್ಯತೆಯಿದ್ದು ಕನ್ನಡ ಚಿತ್ರರಂಗದ ನಟರು ಹಾಗೂ ಪ್ರೇಕ್ಷಕರಲ್ಲಿ ನೆರವು ನೀಡುವಂತೆ ಕೋರಿದ್ದಾರೆ.

Share This With Your Friends

Related posts