Bollywood Cinisuddi Fresh Cini News 

ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಆಪ್ತರಕ್ಷಕನಾದ ಖಳನಟ ಸೋನು ಸೂದ್..!

ಕೊರೋನಾ ಲಾಕ್ಡೌನ್‍ನಿಂದಾಗಿ ಕಳೆದ 2 ತಿಂಗಳಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಅವರು ಬಸ್‍ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸೋನುಸೂದ್ ಕನ್ನಡದಲ್ಲಿ ವಿಷ್ಣುವರ್ಧನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ನೂರಾರು ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದುಕೊಂಡಿದ್ದರು.

ಅಲ್ಲದೆ ತಾವೇ ಒಟ್ಟು ಹತ್ತು ಖಾಸಗಿ ಬಸ್ಸುಗಳನ್ನು ಬುಕ್ ಮಾಡಿ ಅದರ ಸಂಪೂರ್ಣ ಬಾಡಿಗೆಯನ್ನು ತಾವೇ ಭರಿಸಿದ್ದಾರೆ. ಆ ಬಸ್ಸುಗಳಲ್ಲಿ ಕರ್ನಾಟಕದ ವಲಸೆ ಕಾರ್ಮಿಕರನ್ನು ಸೋಮವಾರ ಸಂಜೆ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ಸಹ ವ್ಯವಸ್ಥೆ ಮಾಡುವ ಮೂಲಕ ಕನ್ನಡಿಗರ ಬಗ್ಗೆ ಇರುವ ತಮ್ಮ ಕಾಳಜಿಯನ್ನು ತೋರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್‍ನಟ ಸೋನು ಸೂದ್, ಪ್ರತಿಯೊಬ್ಬರೂ ತಮ್ಮ ಕುಟುಂಬ, ಆತ್ಮೀಯರೊಂದಿಗೆ ಇರಲು ಇಷ್ಟಪಡುತ್ತಾರೆ.

ಆದ್ದರಿಂದ ವಲಸಿಗರನ್ನು ಅವರವರ ಮನೆಗಳಿಗೆ ತಲುಪಿಸಲು ಸಹಾಯ ಮಾಡಲು ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಸರ್ಕಾರಗಳಿಂದ ಅನುಮತಿ ಕೋರಿದ್ದು ಅದರಂತೆ ವಲಸೆ ಕಾರ್ಮಿಕರನ್ನು ಅವರವರ ಸ್ಥಳಗಳಿಗೆ ಕಳಿಸಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಗಳು ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು ಅಗತ್ಯ ದಾಖಲೆಗಳನ್ನು ಒದಗಿಸಿದರು.

ವಲಸೆ ಕಾರ್ಮಿಕರು ಪುಟ್ಟ ಪುಟ್ಟ ಮಕ್ಕಳು ಹಾಗೂ ವೃದ್ಧ ಪೋಷಕರನ್ನು ಕರೆದುಕೊಂಡು ರಸ್ತೆ ಮಾರ್ಗವಾಗಿ ಹೋಗುವುದನ್ನು ಕಂಡು ನನಗೆ ತುಂಬಾ ನೋವಾಗಿತ್ತು. ಹೀಗಾಗಿ ಅವರ ಸಹಾಯಕ್ಕೆ ನಿಂತೆ.

ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಮುಟ್ಟಿಸುವ ನನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಸೋನು ಸೂದ್ ಅವರು ಹೇಳಿದ್ದಾರೆ. 46 ವರ್ಷದ ಈ ನಟ ಪಂಜಾಬ್‍ನಾದ್ಯಂತ 1500ಕ್ಕೂ ಹೆಚ್ಚು ಪಿಪಿಇ ಕಿಟ್‍ಗಳನ್ನು ವೈದ್ಯರಿಗೆ ನೀಡಿದ್ದರು. ಅಷ್ಟೇ ಅಲ್ಲದೆ ವೈದ್ಯಕೀಯ ಸಿಬ್ಬಂದಿಯ ವಸತಿಗಾಗಿ ತಮ್ಮ ಮುಂಬೈನ ಐಶಾರಾಮಿ ಹೋಟೆಲ್‍ನ್ನು ಸರ್ಕಾರಕ್ಕೆ ನೀಡಿದ್ದಾರೆ.

Related posts