Cini Reviews Cinisuddi Fresh Cini News 

ಮನಮುಟ್ಟಿದೆ “ಚಾರ್ಲಿ”ಯ ಪಯಣ… (ಚಿತ್ರ ವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : 777 ಚಾರ್ಲಿ
ನಿರ್ದೇಶಕ : ಕಿರಣ್ ರಾಜ್. ಕೆ
ನಿರ್ಮಾಪಕ : ರಕ್ಷಿತ್ ಶೆಟ್ಟಿ , ಜಿ. ಎಸ್. ಗುಪ್ತಾ
ಸಂಗೀತ : ನೋಬಿನ್ ಪೌಲ್ ಛಾಯಾಗ್ರಹಣ : ಅರವಿಂದ್ ಕಶ್ಯಪ್
ತಾರಾಗಣ : ರಕ್ಷಿತ್ ಶೆಟ್ಟಿ, (ಚಾರ್ಲಿ) ಲ್ಯಾಬ್ರಡಾರ್ , ಸಂಗೀತಾ ಶೃಂಗೇರಿ , ರಾಜ್. ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ ಹಾಗೂ ಮುಂತಾದವರು…

ಸಾಮಾನ್ಯವಾಗಿ ಜನರು ಮಾತನಾಡುವಾಗ ಕೆಲವೊಮ್ಮೆ ನಾಯಿಗಿರುವ ನಿಯತ್ತು… ನಿನಗಿಲ್ಲ. ಅನ್ನೋ ಮಾತು ಕೇಳಿರ್ತ್ತಿವಿ ಅದೇ ರೀತಿ ನಾಯಿ ಕೂಡ ಬಹಳ ಸೂಕ್ಷ್ಮ ಜೀವಿ, ವಿಶ್ವಾಸಕ್ಕೆ ಅರ್ಹವಾದ ಮನುಷ್ಯನಿಗೆ ತುಂಬಾ ಪ್ರಿಯವಾದ ಪ್ರಾಣಿ ಎಂದೇ ಹೇಳಬಹುದು. ಪ್ರಾಣಿ ಹಾಗೂ ಮನುಷ್ಯರ ಸಂಬಂಧ ಕುರಿತು ಹಲವಾರು ಚಿತ್ರಗಳು ಬಂದಿವೆ. ಅದೇ ರೀತಿ ಬಹಳ ಸೂಕ್ಷ್ಮ ಸ್ವಭಾವದ , ಸ್ವಾಮಿನಿಷ್ಠೆಗೆ ಪೂರಕವಾಗಿ ತನಗೆ ಅನ್ನಹಾಕಿದನಿಗೆ ಪ್ರೀತಿ ತೋರಿವ ನಾಯಿ ಹಾಗೂ ಮನುಷ್ಯನ ನಡುವಿನ ಅವಿನಾಭಾವ ಸಂಬಂಧ, ಅದು ತನ್ನ ಮಾಲೀಕನ ಮೇಲೆ ತೋರಿಸುವ ಸ್ನೇಹ, ಪ್ರೀತಿಯ ಅಂಶಗಳನ್ನು ಒಳಗೊಂಡು ತೆರೆಮೇಲೆ ಬಂದಿರುವಂಥ ಚಿತ್ರವೇ 777 ಚಾರ್ಲಿ.

ತನ್ನ ಪ್ರಥಮ ಪ್ರಯತ್ನದಲ್ಲೇ ನಿರ್ದೇಶಕ ಕಿರಣ್‍ರಾಜ್ ಮನುಷ್ಯ ಹಾಗೂ ನಾಯಿಯ ಬಾಂಧವ್ಯದ ಸೂಕ್ಷ್ಮ ಎಳೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಮೇಲೆ ತರುವುದರ ಮೂಲಕ ಯಶಸ್ವಿ ಆಗಿದ್ದಾರೆ. ನಾಯಕ ಧರ್ಮ(ರಕ್ಷಿತ್‍ಶೆಟ್ಟಿ) ಚಿಕ್ಕವನಿದ್ದಾಗಲೇ ತನ್ನ ತಂದೆ, ತಾಯಿ ಸೋದರಿಯನ್ನು ಕಾರು ಅಪಘಾತದಲ್ಲಿ ಕಳೆದುಕೊಂಡು ಸಮಾಜದ ಸಂಪರ್ಕವೇ ಇಲ್ಲದ ಹಾಗೆ ಏಕಾಂಗಿ ಜೀವನ ನಡೆಸುವ ವ್ಯಕ್ತಿ. ಅಂಥವನ ಬಾಳಿನಲ್ಲಿ ಆಕಸ್ಮಿಕವಾಗಿ ನಾಯಿಯೊಂದರ ಪ್ರವೇಶವಾಗುತ್ತದೆ.

ಆರಂಭದಲ್ಲಿ ಅದರ ಸಾಂಗತ್ಯ ಧರ್ಮನಿಗೆ ಕಿರಿಕಿರಿಯುಂಟು ಮಾಡಿದರೂ ಒಂದು ಸಂದರ್ಭದಲ್ಲಿ ಅದು ತನ್ನ ಮೇಲಿಟ್ಟಿರುವ ವಿಶ್ವಾಸ ಧರ್ಮನ ಮನಸನ್ನು ಬದಲಾಯಿಸುತ್ತದೆ, ತನ್ನ ಏಕಾಂಗಿತನವನ್ನು ಹೋಗಲಾಡಿಸಲೆಂದೇ ಬಂದ ಆ ನಾಯಿಯ ಮೇಲೆ ಧರ್ಮನ ಮನದಾಳದಲ್ಲಿ ಪ್ರೀತಿಯ ಚಿಗುರೊಡೆಯುತ್ತದೆ. ಧರ್ಮನಿದ್ದ ಕಾಲೋನಿಯಲ್ಲಿ ಸಾಕು ಪ್ರಾಣಿಗಳಿಗೆ ಅವಕಾಶವಿಲ್ಲದಿದ್ದರೂ ಜನರ ವಿರೋಧ ಕಟ್ಟಿಕೊಂಡು ಆ ನಾಯಿಯನ್ನು ಸಾಕುತ್ತಾನೆ.

ಅದಕ್ಕೆ ಚಾರ್ಲಿ ಅಂತ ಹೆಸರಿಡುತ್ತಾನೆ, ಇವರಿಬ್ಬರ ಸ್ನೇಹಬಾಂಧವ್ಯ ಉತ್ತಮವಾಗಿಯೇ ಸಾಗುತ್ತಿರುವ ಸಂದರ್ಭದಲ್ಲಿ ಕಥೆಗೆ ಹೊಸ ಟ್ವಿಸ್ಟ್ ಸಿಗುತ್ತದೆ. ಅಲ್ಲಿಂದ ಚಿತ್ರಕಥೆ ದಕ್ಷಿಣ ಭಾರತದಿಂದ ಉತ್ತರ ಭಾರತದ ಸ್ವರ್ಗ ಹಿಮಾಲಯ ತಪ್ಪಲಿನೆಡೆಗೆ ಸಾಗುತ್ತದೆ. ಈ ಹಂತದಲ್ಲಿ ಚಾರ್ಲಿಯ ತುಂಟಾಟ, ಅದರಿಂದಾಗಿ ಪರದಾಡುವ ಧರ್ಮನ ಪರಿಸ್ಥಿತಿ ಶ್ವಾನಪ್ರಿಯರಿಗಂತೂ ಬಹಳ ಮೆಚ್ಚುಗೆ ಆಗುವಂತೆ ಕಾಣುತ್ತಿದೆ.

ಚಿತ್ರದ ಕಥಾ ಹಂದರದಲ್ಲಿ ಧರ್ಮನ ವ್ಯಕ್ತಿತ್ವ , ಚಾರ್ಲಿಯ ಪರಿಚಯದಲ್ಲೇ ಅರ್ಧದಷ್ಟು ಸಿನಿಮಾ ಸಾಗುತ್ತದೆ. ಇನ್ನು ಉಳಿದರ್ಧ ಕಥೆಯನ್ನು ಧರ್ಮ ಹಾಗೂ ಚಾರ್ಲಿಯ ನಡುವಿನ ಭಾವನಾತ್ಮಕ ವಿಚಾರಗಳನ್ನು ಕಟ್ಟಿಕೊಂಡು ಹೋಗಿದ್ದಾರೆ. ಚಿತ್ರಕಥೆಯಲ್ಲಿ ಮತ್ತಷ್ಟು ಬಿಗಿ ಮಾಡಿದರೆ ಓಟ ವೇಗಾಗಬಹುದಿತ್ತು. ನಾಯಿಯ ಬಗ್ಗೆ ಏನೂ ಗೊತ್ತಿಲ್ಲದ ಧರ್ಮ ಅದನ್ನು ಪಾಲನೆ, ಪೋಷಿಸಲು ಹೋದಾಗ ಹೇಗೆಲ್ಲ ಪರದಾಡುತ್ತಾನೆ ಎಂಬುದನ್ನು ನಿರ್ದೇಶಕರು ನೈಜವಾಗಿ ತೆರೆಮೇಲೆ ತರಲು ಬಹಳಷ್ಟು ಶ್ರಮವಹಿಸಿದ್ದಾರೆ.

ಯಾಕೆಂದ್ರೆ ನಾಯಿಯ ಮೂಲಕ ಕೆಲಸ ತೆಗೆಸುವುದು ಸುಲಭದ ಮಾತಲ್ಲ, ಆ ಪ್ರಾಣಿಯ ಸಮಯಕ್ಕೆ ಕಾದು ಸೂಕ್ಷ್ಮವಾಗಿ ದೃಶ್ಯಗಳನ್ನ ಚಿತ್ರೀಕರಿಸುವುದರಲ್ಲಿ ಛಾಯಾಗ್ರಹಣ ಜೊತೆ ನಿರ್ದೇಶಕರು ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಸೂಕ್ಷ್ಮ ಎಳೆಯನ್ನು ಬಹಳ ಅರ್ಥಪೂರ್ಣವಾಗಿ ತೆರೆಮೇಲೆ ನಿರ್ದೇಶಕರು ತಂದು ಗೆದ್ದಿದ್ದಾರೆ

ಈ ಚಿತ್ರದಲ್ಲಿ ಧರ್ಮನಾಗಿ ರಕ್ಷಿತ್‍ಶೆಟ್ಟಿ ಕೂಡ ತನ್ನ ಭಾವಪೂರ್ವಕ ಅಭಿನಯದ ಮೂಲಕ ನೋಡುಗರಿಗೆ ಹತ್ತಿರವಾಗುತ್ತಾರೆ. ಧರ್ಮ ಹಾಗೂ ಚಾರ್ಲಿಯ ನಡುವಿನ ಈ ಪಯಣದಲ್ಲಿ ಮೂರನೆಯವರಿಗೆ ಅವಕಾಶವಿಲ್ಲ, (ಚಾರ್ಲಿ) ಲ್ಯಾಬ್ರಡಾರ್ ನಾಯಿ ಪ್ರತಿಕ್ರಯಿಸುವ ಪರಿ, ವ್ಯಕ್ತಪಡಿಸುವ ಭಾವನೆ ನಿಜಕ್ಕೂ ಪ್ರೇಕ್ಷಕರನ್ನ ಆವರಿಸಿಕೊಂಡು ಎಲ್ಲರ ಗಮನ ಸೆಳೆಯುವ ಮೂಲಕ ಮನವನ್ನು ಮುಟ್ಟುತ್ತದೆ.

ಪಶು ಸಂರಕ್ಷಣಾ ಅಧಿಕಾರಿಣಿಯಾಗಿ ಸಂಗೀತಾ ಶೃಂಗೇರಿ ಕಥೆಯಲ್ಲಿ ಆಗಾಗ ಬಂದು ಹೋಗುತ್ತಾರಷ್ಟೇ. ಜೊತೆಗೆ ಪಶುವೈದ್ಯನ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ತನ್ನ ಮ್ಯಾನರಿಸಂ ಮೂಲಕವೇ ಪ್ರೇಕ್ಷಕರನ್ನು ನಗಿಸುತ್ತಾರೆ. ಉಳಿದಂತೆ ಇವರಿಬ್ಬರ ಪಯಣದ ಹಾದಿಯಲ್ಲಿ ಬಾಬಿ ಸಿಂಹ ಅವರ ಪಾತ್ರ ಎಂಟ್ರಿಯಾಗಿ ಧರ್ಮನ ಪಾತ್ರವನ್ನು ಇನ್ನಷ್ಟು ಪರಿಪಕ್ವವಾಗಿಸುತ್ತದೆ. ಹಾಗೆಯೇ ಡ್ಯಾನಿಶ್ ಸೇಠ್ ಸೇರಿದಂತೆ ಹಲವು ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇನ್ನು ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಅರವಿಂದ್ ಕಶ್ಯಪ್ ರವರ ಕ್ಯಾಮರಾ ಕೈಚಳಕ ಅದ್ಬುತವಾಗಿ ಮೂಡಿಬಂದಿದೆ. ಧರ್ಮ ಹಾಗೂ ಚಾರ್ಲಿಯ ಮನಮಿಡಿಯುವ ದೃಶ್ಯಗಳನ್ನ ಬಹಳ ಅಚ್ಚುಕಟ್ಟಾಗಿ ಸೆರೆ ಹಿಡಿಯುವುದರ ಜೊತೆಗೆ ಹಿಮ ಮಂಜಿನ ಸುಂದರ ತಾಣಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಅದೇ ರೀತಿ ಈ ಚಿತ್ರಕ್ಕೆ ಸಂಗೀತ ನೀಡಿರುವ ನೋಬಿನ್ ಪೌಲ್ ರವರ ಹಿನ್ನೆಲೆ ಸಂಗೀತ ಚಿತ್ರದ ಗಮನಸೆಳೆಯುತ್ತದೆ.

ಇಂಥ ವಿಶೇಷ ಪ್ರಯತ್ನ , ಪ್ರಯೋಗಗಳ ಚಿತ್ರಕ್ಕೆ ತಂಡದ ಶ್ರಮವನ್ನು ಮೆಚ್ಚಲೇಬೇಕು. ಪ್ರಾಣಿಗಳ ಪ್ರತಿಕ್ರಿಯೆ ಯಾವತ್ತೂ ಕೃತಕವಾಗಿರುವುದಿಲ್ಲ, ಅದು ನೈಜವಾಗಿರುತ್ತೆ, ನಾಯಿಗಳಿಗೆ ನಟಿಸುವುದು ಗೊತ್ತಿರಲ್ಲ, ತನ್ನ ಮಾಲೀಕನನ್ನು ಪ್ರೀತಿಸುವುದಷ್ಟೇ ಅದಕ್ಕೆ ಗೊತ್ತು. ಸಿನಿಮಾದ ಪ್ರತಿ ದೃಶ್ಯದಲ್ಲೂ ಸನ್ನಿವೇಶಕ್ಕೆ ತಕ್ಕಂತೆ ಚಾರ್ಲಿ ಪಾತ್ರಧಾರಿ ನಾಯಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ನಾಯಿಗೆ ತರಬೇತಿ ನೀಡಿದವರನ್ನ ಮೆಚ್ಚಲೇಬೇಕು. ಒಟ್ಟಾರೆ ಎಲ್ಲರೂ ನೋಡುವಂತಹ ಒಂದು ಉತ್ತಮ ಚಿತ್ರವಾಗಿ ಹೊರಬಂದಿರುವ 777 ಚಾರ್ಲಿ ಯನ್ನು ಎಲ್ಲರೂ ಹೋಗಿ ನೋಡಬಹುದು.

Related posts