ಉಸಿರು ಬಿಗಿ ಹಿಡಿಯುವಂತೆ ಮಾಡುವ “5 ಅಡಿ 7 ಅಂಗುಲ” ಚಿತ್ರ ( ಚಿತ್ರ ವಿಮರ್ಶೆ)
ರೇಟಿಂಗ್ : 4/5
ಚಿತ್ರ : 5 ಅಡಿ 7 ಅಂಗುಲ
ನಿರ್ದೇಶಕ : ನಂದಳಿಕೆ ನಿತ್ಯಾನಂದ ಪ್ರಭು
ಸಂಗೀತ : ರಘು ಠಾಣೆ ಛಾಯಾಗ್ರಹಣ : ರುದ್ರಮುನಿ
ತಾರಾಗಣ : ರಾಸಿಕುಮಾರ್, ಅದಿತಿ, ಭುವನ್, ಮಹೇಂದರ್ ಪ್ರಸಾದ್, ವೀಣಾ ಸುಂದರ್, ಚಕ್ರವರ್ತಿ ಸತ್ಯನಾಥ್, ಪವನ್, ಪ್ರಣವ ಮೂರ್ತಿ, ನರೇಂದ್ರ ಹಾಗೂ ಮುಂತಾದವರು…
ಪ್ರತಿ ಸನ್ನಿವೇಶಗಳಲ್ಲೂ ರೋಚಕತೆಯ ಅಂಶಗಳನ್ನು ಒಳಗೊಂಡಿರುವ ಚಿತ್ರ ಪ್ರೇಕ್ಷಕರ ಮುಂದೆ 5ಅಡಿ 7 ಅಂಗುಲ ಎನ್ನುತ್ತಾ ಬಂದಿದೆ. ಚಿತ್ರದ ಕಥಾ ಹಂದರದ ಪ್ರಕಾರ ಅಲ್ಲೊಂದು ನಿರೀಕ್ಷಿಸದ ಘಟನೆ ಕೂಡ ನಡೆದು ಹೋಗುತ್ತೆ. ಅದರ ಹಿಂದೆ ಒಂದು ರಹಸ್ಯವಿರುತ್ತೆ. ಆ ರಹಸ್ಯ ಏನೆಂಬುದೇ ಚಿತ್ರದ ಇಡೀ ಚಿತ್ರದ ಮುಖ್ಯ ಎಳೆ.
ಚೇಷ್ಟೇ , ಕುಚೇಷ್ಟೇ, ತಂತ್ರ, ಕುತಂತ್ರ, ಯುಕ್ತಿ ಅದರ ಸುತ್ತ ಬೆಸೆದಿರುವ ಈ ಕಥೆಯು ಮರ್ಡರ್ ಮಿಸ್ಟ್ರಿ ಅಂಶ ಕೇಂದ್ರವಾಗಿದ್ದು, ಸಣ್ಣ ಸಣ್ಣ ಟ್ವಿಸ್ಟ್ಗಳ ಮೂಲಕ ನೋಡುಗರಲ್ಲಿ ಕುತೂಹಲ ಹೆಚುಸತ್ತದೆ. ಮೋಜು ಮಸ್ತಿಯಲ್ಲಿ ಸದಾ ಕಾಲ ಕಳೆಯುವ ಆರು ಜನ ಗೆಳೆಯರ ಬಳಗ. ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಹುಡುಗರ ಆಟ, ಹುಡುಗಾಟ ಒಂದಾ ಎರಡಾ ಇದರ ನಡುವೆ ಪ್ರಾಂಕ್ (ಬಕರ) ಮಾಡುವ ಕೆಲಸ ನಡೆಯುತ್ತಿರುತ್ತೆ.
ಇದರ ನಡುವೆ ಗೆಳೆಯನೊಬ್ಬನ ಮದುವೆ ತಯಾರಿ ನಡೆಯುತ್ತಿದೆ. ಕೇವಲ ಮೂರು ದಿನ ಇರುವ ಗೆಳೆಯನ ಮದುವೆ ವಿಚಾರದಿಂದ ಗೆಳೆಯರು ಪಾರ್ಟಿ ಕೊಡಲು ಕೇಳುತ್ತಾರೆ. ತನ್ನ ಮುದಿನ ತಾಯಿ ಹಾಗೂ ಪ್ರೀತಿಯ ಗೆಳತಿಯನ್ನು ಒಪ್ಪಿಸಿ ಗೆಳೆಯರೊಂದಿಗೆ ಪಾರ್ಟಿ ಮಾಡಲು ಮಿನಿ ವ್ಯಾನ್ ತೆಗೆದುಕೊಂಡು ಹೊರಡುತ್ತಾರೆ.
ಕುಡಿದ ಮತ್ತಿನಲ್ಲಿ ಮೋಜು, ಮಸ್ತಿಯೊಂದಿಗೆ ಗೆಳೆಯನ ಕೈಕಾಲನ್ನು ಕಟ್ಟುಹಾಕಿ ಕಾಫಿನ್ ಬಾಕ್ಸ್ ಗೆ ಹಾಕಿ ಮಣ್ಣಲ್ಲಿ ನಾಲ್ವರು ಗೆಳೆಯರು ಹೂತು ಹಾಕುತ್ತಾರೆ. ಅದೊಂದು ಬಕರ ಆಟವೇ ಇರಬೇಕು ಅಂದುಕೊಂಡರೆ, ಅಲ್ಲಿ ನಡೆಯೋದೇ ಬೇರೆ. ನಂತರ ಕುಡಿದ ಅಮಲಿನಲ್ಲೇ ಆ ಗೆಳೆಯರು ವ್ಯಾನ್ ಓಡಿಸಿಕೊಂಡು ಬರುವಾಗ ಅಪಘಾತದಲ್ಲಿ ಅಸುನೀಗುತ್ತಾರೆ. ಇದೊಂದು ಕೇಸ್ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.
ಆಗಾಗ ಕಾಣುವ ಒಂದು ಕಾಗೆ ಕೂಡ ಚಿತ್ರದ ಓಟದಲ್ಲಿ ಏನೋ ಹೇಳಲು ಹೊರಟಂತೆ ಕಾಣುತ್ತದೆ. ಐವರು ಹೊರಟ ಪಾರ್ಟಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದಾನೆ. ಇದಕ್ಕೆ ಕಾರಣ ಏನು ಎಂಬ ಯಕ್ಷ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ತಾಯಿ ಮಗನನ್ನು ಕಳೆದು ಕಂಗಾಲಾಗಿ ಪರಿತಪಿಸುತ್ತಿದ್ದರೆ, ಮತ್ತೊಂದು ಕಡೆ ಪ್ರೇಯಸಿ ತನ್ನ ಪ್ರಿಯಕರನ ಹುಡುಕಿಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದರೆ, ಮತ್ತೊಬ್ಬ ಗೆಳೆಯ ಈ ಗೊಂದಲಕ್ಕೆ ತೆರೆ ಹಿಡಿಯಿರಿ ಎಂದು ಗೊಂದಲದ ಮಾತುಗಳನ್ನು ಆಡುತ್ತಾನೆ.
ಹೀಗೆ ಒಂದರ ಹಿಂದೆ ಒಂದಂತೆ ಗೊಂದಲಗಳು ಸೃಷ್ಟಿ ಆಗುತ್ತಲೇ ಹೋಗುತ್ತದೆ. ಇಡೀ ಚಿತ್ರದ ಕ್ಲೈಮಾಕ್ಸ್ ಹಂತದವರೆಗೂ ನಿಜವಾಗಿಯೂ ನಡೆಯುತ್ತಿರುವುದು ಏನು ಎಂಬುದೇ ತಿಳಿಯುವುದಿಲ್ಲ. ನಿಜವಾಗಿಯೂ ಗೆಳೆಯನನ್ನು ಹೂತುಹಾಕಿದ್ದ ಕಾರಣವೇನು… ? ಆ ನಾಲ್ವರು ಆಕ್ಸಿಡೆಂಟ್ ಯಾಕೆ ಆಯಿತು…? ಇದರ ಹಿಂದೆ ಇರುವ ವ್ಯಕ್ತಿಗಳು ಯಾರು… ನಿಜವಾಗಿ ನಡೆದಿದ್ದು ಏನು…. ಎಂಬ ಎಲ್ಲಾ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಒಮ್ಮೆ 5 ಅಡಿ 7 ಅಂಗಲ ಚಿತ್ರವನ್ನು ನೀವು ಚಿತ್ರಮಂದಿರದಲ್ಲಿ ನೋಡಲೇಬೇಕು.
ಈ ಚಿತ್ರದ ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು ತಮ್ಮ ಪ್ರಥಮ ಪ್ರಯತ್ನದಲ್ಲೇ ಒಂದು ವಿಭಿನ್ನ ಮರ್ಡರ್ ಮಿಸ್ಟ್ರಿ ಕತೆಯನ್ನು ಕುತೂಹಲಕಾರಿಯಾಗಿ ತೆರೆಯ ಮೇಲೆ ತೋರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನಿರ್ಮಾಣದ ಜೊತೆಗೆ ನಿರ್ದೇಶನದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿರುವುದು ಎದ್ದು ಕಾಣುತ್ತದೆ. ಚಿತ್ರದ ಮೊದಲ ಭಾಗ ಸ್ವಲ್ಪ ನಿಧಾನಗತಿ ಅನಿಸಿದರೂ ಚಿತ್ರದ ಎರಡನೇ ಭಾಗ ಓಟಕ್ಕೆ ಸಾಥ್ ನೀಡಿದೆ.
ಇನ್ನು ಚಿತ್ರದ ಅಭಿನಯಿಸಿರುವ ಬಹುತೇಕ ಯುವ ಪ್ರತಿಭೆಗಳು ತಕ್ಕ ಮಟ್ಟಕ್ಕೆ ಜೀವ ತುಂಬಿದ್ದಾರೆ . ಅದರಲ್ಲಿ ನಾಯಕನಾಗಿ ರಾಸಿಕುಮಾರ್ ಪೆಟ್ಟಿಗೆಯಲ್ಲಿ ಪರದಾಡುವ ಸ್ಥಿತಿ ಮೈ ಜುಮ್ಮೆನಿಸುತ್ತದೆ. ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ನಾಯಕಿಯಾಗಿ ಅದಿತಿ ಕೂಡ ಎರಡು ಶೇಡ್ನಲ್ಲಿ ಗಮನ ಸೆಳೆಯುತ್ತಾರೆ. ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ವೀಣಾ ಸುಂದರ್ ಕೂಡ ಉತ್ತಮವಾಗಿ ಪಾತ್ರ ನಿರ್ವಹಿಸಿದ್ದಾರೆ.
ಹಾಗೆಯೇ ಇನ್ಸ್ಪೆಕ್ಟರ್ ಪಾತ್ರಧಾರಿ ಕೂಡ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ. ಇನ್ನು ರಘು ಠಾಣೆ ರವರ ಸಂಗೀತ ಗಮನಾರ್ಹವಾಗಿದ್ದು , ಛಾಯಾಗ್ರಾಹಕ ರುದ್ರಮುನಿ ಬೆಳಗೆರೆ ಕೈಚಳಕ ಉತ್ತಮವಾಗಿದೆ. ಸಂಕಲನಕಾರ ಬಿ.ಎಸ್. ಕೆಂಪರಾಜ್ ಅವರ ಎಡಿಟಿಂಗ್ ಪ್ಯಾಟ್ರನ್ ಸೊಗಸಾಗಿದೆ. ಒಟ್ಟಾರೆ ಒಂದು ವಿಭಿನ್ನ ಪ್ರಯತ್ನದ ಫಲವಾಗಿ ಬಂದಿರುವ 5 ಅಡಿ 7 ಅಂಗುಲ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.