Uncategorized 

200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪಡ್ಡೆ ಹುಲಿ’ ಘರ್ಜನೆ ಶುರು

ಸಾಹಸಸಿಂಹ ವಿಷ್ಣುವರ್ಧನ್‍ರ ಅಪ್ಪಟ ಅಭಿಮಾನಿ ಹಾಗೂ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿರುವ ಪಡ್ಡೆಹುಲಿಯು ರಾಜಾದ್ಯಾದ್ಯಂತ ಈ ವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಘರ್ಜನೆಯನ್ನು ಶುರು ಮಾಡಲಿದೆ.
ಚಿತ್ರ ಬಿಡುಗಡೆಯ ವಿಚಾರವನ್ನು ತಿಳಿಸಲು ಚಿತ್ರತಂಡವು ಮೊನ್ನೆ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಅಲ್ಲಿ ಚಿತ್ರತಂಡದವರು ತಮ್ಮ ಸಂತಸವನ್ನು ಹಂಚಿಕೊಂಡರು.


ನಿರ್ದೇಶಕ ಗುರುದೇಶಪಾಂಡೆ ಮಾತನಾಡಿ, ಪ್ರೇಮಲೋಕದ ಮೂಲಕ ಚಿತ್ರತಂಡಕ್ಕೆ ಹೊಸದೊಂದು ಆಯಾಮವನ್ನು ತಂದುಕೊಟ್ಟ ಕ್ರೇಜಿಸ್ಟಾರ್ ರವಿಚಂದ್ರನ್‍ರೊಂದಿಗೆ ಕೆಲಸ ಮಾಡಿದ್ದೇ ಒಂದು ಉತ್ತಮ ಅನುಭವ. ಚಿತ್ರೀಕರಣದ ವೇಳೆ ಅವರು ಕೊಟ್ಟ ಸಲಹೆಗಳನ್ನು ಅಳವಡಿಸಿಕೊಂಡಿದ್ದರಿಂದಲೇ ಚಿತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‍ರವರ ನೆನಪನ್ನು ಜ್ಞಾಪಿಸುವ ದಾಟಿಯಲ್ಲಿ ಚಿತ್ರ ಸಾಗುವುದರಿಂದ ಬಹುತೇಕ ಚಿತ್ರೀಕರಣವನ್ನು ಚಿತ್ರದುರ್ಗದಲ್ಲೇ ಚಿತ್ರೀಕರಿಸಿದ್ದೇವೆ,

ರವಿ ಸಾರ್ ಅವರು ಮಾಣಿಕ್ಯದಲ್ಲಿ ಉತ್ತಮ ತಂದೆಯಾಗಿ ಪ್ರೇಕ್ಷಕರನ್ನು ರಂಜಿಸಿದಂತೆ, ಈ ಚಿತ್ರದಲ್ಲೂ ಶ್ರೇಯಾಸ್ ಅವರ ತಂದೆಯಾಗಿ ಉತ್ತಮ ಅಭಿನಯ ನೀಡಿದ್ದು, ಅವರಿಬ್ಬರ ಕಾಂಬಿನೇಷನ್‍ನ ದೃಶ್ಯಗಳು ಪ್ರೇಕ್ಷಕರ ಮನ ಮುಟ್ಟಲಿದೆ. ಪ್ರೇಮಲೋಕ ಚಿತ್ರದಂತೆ ಈ ಚಿತ್ರದಲ್ಲೂ 10 ಗೀತೆಗಳನ್ನು ಮಾಡಲು ರವಿಯವರೇ ಸ್ಫೂರ್ತಿ. ಈಗ ಟ್ರೆಂಡ್‍ಗೆ ಇಷ್ಟವಾಗುವಂತಹ ಐದು ಹಾಡುಗಳಿದ್ದರೆ, ಐವರು ಪ್ರಸಿದ್ಧ ಕವಿಗಳ ಕವನಗಳನ್ನು ಬಳಸಿಕೊಂಡು ಗೀತೆಗೆ ಅಳವಡಿಸಿಕೊಂಡಿದ್ದೇವೆ.

ಈ ಚಿತ್ರದಲ್ಲಿ ಕುಟುಂಬ ಮೌಲ್ಯಘಿ, ಪ್ರೀತಿಯ ಸೆಳೆತ, ಬದುಕಿನ ಹಾದಿಯ ಜೊತೆಗೆ ಯುವ ಜನಾಂಗಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದ್ದೇವೆ. ರವಿಚಂದ್ರನ್‍ರವರ ಹಠವಾದಿ ಚಿತ್ರದಂತೆ ಈ ಚಿತ್ರದ ನಾಯಕನಿಗೂ ಉತ್ತಮ ಸಂಗೀತಗಾರನಾಗುವ ಹಂಬವಿರುತ್ತದೆ ಅದನ್ನು ಆತ ಈಡೇರಿಸಿಕೊಳ್ಳುತ್ತಾನೆಯೇ ಎಂಬುದೇ ಚಿತ್ರದ ಕಥೆ. ನಿರ್ಮಾಪಕರು ಹಾಗೂ ಕಲಾವಿದರ ಸಹಕಾರವನ್ನು ಮರೆಯುವಂತಿಲ್ಲ ಎಂದು ಹೇಳಿದರು.
ನಿರ್ಮಾಪಕ ರಮೇಶ್‍ರೆಡ್ಡಿ ಮಾತನಾಡಿ, ನಮ್ಮ ತೇಜಸ್ವಿನಿ ಎಂಟರ್‍ಪ್ರೈಸಸ್‍ನಡಿ ನಿರ್ಮಾಣವಾಗಿರುವ ಭಾರೀ ಬಜೆಟ್ಟಿನ ಸಿನಮಾ ಇದು. ಕಲಾವಿದರು ಹಾಗೂ ತಂತ್ರಜ್ಞರ ಸಂಪೂರ್ಣ ಸಹಕಾರದಿಂದ ಚಿತ್ರ ಸೊಗಸಾಗಿ ಮೂಡಿಬಂದಿದ್ದು, ಎಲ್ಲೂ ರಾಜಿ ಆಗದೆ ಚಿತ್ರ ಕೇಳಿದ್ದನ್ನು ನೀಡಿದ್ದು ಪ್ರೇಕ್ಷಕರಿಂದ ಉತ್ತಮ ಬೆಂಬಲ ದೊರೆಯಲಿದೆ ಎಂದು ಹೇಳಿದರು.


ನಾಯಕ ಶ್ರೇಯಸ್ ಮಾತನಾಡಿ, 18 ರಿಂದ 24 ವಯೋಮಾನದವರೆಗೆ ಸಂಚರಿಸುವ ಪಾತ್ರ ಇದಾಗಿದ್ದು, ರವಿ ಸಾರ್‍ರೊಂದಿಗೆ ನಟಿಸಿದ್ದು ತುಂಬಾ ದೊಡ್ಡ ಅನುಭವವಾಗಿದೆ. ಮೊದಮೊದಲು ಅವರೊಂದಿಗೆ ನಟಿಸಲು ಹೆದರಿಕೆಯಾಗುತ್ತಿದ್ದಾದರೂ ರವಿ ಸಾರ್ ಅವರೇ ನೀನು ಈ ಚಿತ್ರದ ನಾಯಕ ಹೆದರಬೇಡ ಎಂದು ಧೈರ್ಯ ತುಂಬಿ ನಟನೆಯ ಬಗ್ಗೆ ಟಿಪ್ಸ್ ನೀಡಿದರು. ನಿರ್ದೇಶಕ ಗುರುದೇಶಪಾಂಡೆಯವರು ನನ್ನಲ್ಲಿರುವ ಕಲಾವಿದನಿಂದ ಅದ್ಭುತ ಕೆಲಸ ತೆಗೆಸಿದ್ದು, ನನ್ನ ಚಿತ್ರ ಪಯಣಕ್ಕೆ ಪಡೆಹುಲಿ ಉತ್ತಮ ಮೆಟ್ಟಲಾಗಲಿದೆ ಎಂದರು.


ನಾಯಕಿ ನಿಶ್ವಿಕಾ ನಾಯ್ಡು, ಈ ಹಿಂದೆ ನಾನು ನಟಿಸಿದ್ದ ಚಿತ್ರಗಳಿಗಿಂತ ವಿಭಿನ್ನ ಪಾತ್ರ. ಈ ಚಿತ್ರದ ನಾಯಕನಿಗೆ ಸಂಗೀತವೆಂದರೆ ಬಲು ಇಷ್ಟ. ನನ್ನ ಪಾತ್ರದ ಹೆಸರು ಅದೇ ಆಗಿದೆ. ಪ್ರೇಕ್ಷಕರನ್ನು ಚಿತ್ರವನ್ನು ನೋಡಿ ನಮ್ಮನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡರು. ರವಿಚಂದ್ರನ್ ಮಾತನಾಡಿ, ಶ್ರೇಯಾಸ್ ತುಂಬಾ ಎಫರ್ಟ್ ಹಾಕಿ ಈ ಚಿತ್ರದಲ್ಲಿ ನಟಿಸಿದ್ದು ಅವನಲ್ಲಿ ಒಬ್ಬ ನಟನಾಗಿ ಬೆಳೆಯುವ ಎಲ್ಲಾ ಲಕ್ಷಣಗಳಿವೆ. ಈ ಚಿತ್ರದ ಮೂಲಕ ಮಂಜು ತಮ್ಮ ಮಗನನ್ನು ಹೀರೋ ಮಾಡುವ ಕನಸು ನನಸಾಗಿಸಿಕೊಂಡಂತೆ ಚಿತ್ರದಲ್ಲಿ ಮಕ್ಕಳ ಏಳಿಗೆಗಾಗಿ ಪೋಷಕರು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ತೋರಿಸಿದ್ದು ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ದೊರೆಯಲಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಪಡ್ಡೆ ಹುಲಿಯಲ್ಲಿ ರವಿಚಂದ್ರನ್‍ರೊಂದಿಗೆ ಸ್ಟಾರ್ ನಟರುಗಳಾದ ರಕ್ಷಿತ್‍ಶೆಟ್ಟ ಹಾಗೂ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರು ನಟಿಸಿರುವುದರಿಂದ ಶ್ರೇಯಾಸ್‍ಗೆ ಆನೆ ಬಲ ಬಂದಂತಾಗಿದೆ.ಸುಧಾರಾಣಿ, ಮಧುಸೂದನ್, ರಂಜಿತ್, ಚಿಕ್ಕಣ್ಣ, ಧರ್ಮಣ್ಣ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.


ಛಾಯಾಗ್ರಾಹಕ ಕೆ.ಎಸ್.ಚಂದ್ರಶೇಖರ್ ಅವರ 25ನೆ ಚಿತ್ರ ಕೂಡ ಇದಾಗಿದೆ. ಈ ಚಿತ್ರದಲ್ಲಿ 10 ಹಾಡುಗಳಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪಡ್ಡೆಹುಲಿ ಚಿತ್ರದ ಮೂಲಕ ನಾಯಕನಾಗಲು ಹೊರಟಿರುವ ಶ್ರೇಯಾಸ್‍ನ ಪ್ರಯತ್ನಕ್ಕೆ ಪ್ರೇಕ್ಷಕರು ಹಾರೈಸುವಂತಾಗಲಿ.

Related posts