ಆದಿವಾಸಿಗಳ ಹೋರಾಟದ ನೈಜ ಘಟನೆಯ ಚಿತ್ರ 19.20.21(ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ :19.20.21
ನಿರ್ದೇಶಕ : ಮಂಸೋರೆ
ನಿರ್ಮಾಪಕ: ದೇವರಾಜ್.ಆರ್
ಸಂಗೀತ : ಬಿಂದು ಮಾಲಿನಿ
ಛಾಯಾಗ್ರಹಣ : ಶಿವು.ಬಿ.ಕುಮಾರ್
ತಾರಾಗಣ : ಶೃಂಗ .ಬಿ, ಎಂ. ಡಿ.ಪಲ್ಲವಿ, ಸಂಪತ್, ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಮಹದೇವ್ ಹಡಪದ್, ವಿಶ್ವ ಕರ್ಣ,ವೆಂಕಟೇಶ್ ಪ್ರಸದ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ನೈಜ ಘಟನೆ ಆಧಾರಿತ ಚಿತ್ರಗಳು ಬಹಳ ಬೇಗ ಎಲ್ಲರನ್ನ ತಲುಪುತ್ತದೆ. ವಾಸ್ತವತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಅದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅಂತಹದ್ದೇ ಒಂದು ಕರಾವಳಿ ಭಾಗಕ್ಕೆ ಹೊಂದಿಕೊಂಡಿರುವಂತಹ ಮಲೆಕುಡಿ ಸಮುದಾಯದ ಬದುಕು, ಬವಣೆ ಮತ್ತು ನಕ್ಸಲ್ ನಂಟು, ಅರಣ್ಯ ಸಂಪತ್ತಿನ ನಾಶ ಹೀಗೆ ಹತ್ತು ಹಲವು ಆರೋಪಗಳ ಮೂಲಕ ಆದಿವಾಸಿಗಳ ಬದುಕನ್ನ ನಾಶ ಮಾಡಬೇಕು ಎಂಬ ಹೊನ್ನಾರಕ್ಕೆ ಧ್ವನಿ ಎತ್ತಿ ಹೋರಾಟ ಮಾಡಿ ಕಾನೂನು ರೀತಿಯಲ್ಲಿ ಸಂವಿಧಾನದಲ್ಲಿ ರುವ ಮಾರ್ಗಸೂಚಿಯಂತೆ ನಮ್ಮ ಹಕ್ಕನ್ನ ನಾವು ಹೇಗೆ ಪಡೆಯಬೇಕು ಎಂಬುದನ್ನು ಬಹಳ ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವಾಗಿ ಪ್ರೇಕ್ಷಕರ ಮುಂದೆ ಬಂದಂತಹ ಚಿತ್ರವೇ ಆರ್ಟಿಕಲ್ “19.20.21”.
ದಶಕಗಳ ಕಾಲದಿಂದ ಆದಿವಾಸಿ ಜನರು ತಾವಾಯಿತು ತಮ್ಮ ಬದುಕಾಯ್ತು ಎನ್ನುತ್ತಾ ಕಾಡೇ ಜೀವನವಾಗಿಸಿಕೊಂಡು ದಟ್ಟ ಅರಣ್ಯದ ನಡುವೆ ನೆಮ್ಮದಿ ಜೀವನ ನಡೆಸುವ ಮಲೆಕುಡಿ ಜನಾಂಗದವರು. ಬೆರಳೆಣಿಕೆಯಷ್ಟು ಜನವಿರುವ ಈ ಕುಟುಂಬದ ಕೆಲವು ಮಕ್ಕಳು ಉತ್ತಮ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ನಲ್ಲಿ ಇದ್ದು ಓದುಕೊಳ್ಳುತ್ತಿರುತ್ತಾರೆ. ಆ ಹಾದಿಯಲ್ಲಿ ಕಥಾನಾಯಕ ಮಂಜು ( ಶೃಂಗ. ಬಿ.) ಕೂಡ ಒಬ್ಬ. ದಟ್ಟ ಅರಣ್ಯದಲ್ಲಿ ಆಗಾಗ ನಕ್ಸಲಿಗರ ಚಟುವಟಿಕೆಗಳು ಮತ್ತು ಅವರ ಆರ್ಭಟಕ್ಕೆ ಆದಿವಾಸಿಗಳ ಬೆಂಬಲವಿದೆ ಎಂಬ ಕಾರಣಕ್ಕೆ ನಕ್ಸಲ್ ನಿಗ್ರಹ ದಳ ಆದಿವಾಸಿಗಳಿಗೆ ಹಿಂಸೆ ನೀಡಿ ವಿಚಾರಣೆಯನ್ನು ಕೂಡ ಚುರುಕುಗೊಳಿಸುತ್ತಾರೆ.
ಇದು ಮುಗ್ಧ ಜನರ ಬದುಕನೇ ನಾಶ ಮಾಡುತ್ತಾ ಹೋಗುತ್ತದೆ. ಈ ವಿಚಾರ ವಾಹಿನಿ ವರದಿಗಾರ, ಪತ್ರಕರ್ತ ಹಾಗೂ ಹೋರಾಟಗಾರರ ಗಮನಕ್ಕೆ ಬರುತ್ತದೆ. ವಿದ್ಯಾರ್ಥಿ ಮಂಜು ಆದಿವಾಸಿಗಳ ನೋವು , ಸಂಕಷ್ಟವನ್ನು ಇವರ ಗಮನಕ್ಕೆ ತರುತ್ತಾನೆ. ಮುಂದೆ ಅವರೊಟ್ಟಿಗೆ ನಿಂತು ನ್ಯಾಯಯುತ ಹೋರಾಟದ ಆದಿ ಹಿಡಿಯುತ್ತಾನೆ.
ಇದು ಸರಕಾರಕ್ಕೂ ದೊಡ್ಡ ತಲೆನೋವು ಆಗಿ ಪರಿಣಮಿಸುತ್ತದೆ. ಒತ್ತಡದ ನಡುವೆಯೇ ಮಂಜು ಅವನ ತಂದೆ ರಾಮಣ್ಣನನ್ನು ಹಿಡಿದು ನಕ್ಸಲಿಗರ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪದಲ್ಲಿ ಪೊಲೀಸ್ ವಶಕ್ಕೆ ಪಡೆಯುತ್ತಾರೆ.
ಮಂಜು ವಿದ್ಯಾವಂತ ಆತನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು , ಉತ್ತಮ ಭವಿಷ್ಯವಿರುವ ಮಂಜು ನಕ್ಸಲ್ ಅಣೆಪಟ್ಟಿ ಕಟ್ಟಿಕೊಂಡು ಬದುಕುವ ಅವಶ್ಯಕತೆ ಇಲ್ಲ ಎಂದು ತೀರ್ಮಾನಿಸುವ ಹೋರಾಟಗಾರರು ಮಂಜು ಹಾಗೂ ಅವನ ತಂದೆಯನ್ನು ಆರೋಪದಿಂದ ಮುಕ್ತಿಗೊಳಿಸಬೇಕೆಂದು ಲಾಯರ್ ಮುಖಾಂತರ ಕಾನೂನು ರೀತಿಯ ಹೋರಾಟಕ್ಕೆ ಮುಂದಾಗುತ್ತಾರೆ. ಈ ವಿಚಾರ ರಾಜ್ಯ ಹಾಗೂ ದೇಶದ ದೇಶದಾದ್ಯಂತ ಸುದ್ದಿಯಾಗಿ ಪಾರ್ಲಿಮೆಂಟ್ ನಲ್ಲೂ ಕೂಡ ಚರ್ಚೆಗೆ ಕಾರಣವಾಗುತ್ತದೆ. ಮುಂದೆ ಈ ವಿಚಾರ ಮತೊಂದು ತಿರುವು ಪಡೆದುಕೊಳುತ್ತದೆ.
19.20.21 ಅಂದರೇನು…
ಆದಿವಾಸಿಗಳಿಗೆ ನ್ಯಾಯ ಸಿಗುತ್ತಾ…
ಯುಎ (ಪಿ)ಎ ಎಂದರೇನು…
ಸಂವಿಧಾನದಲ್ಲಿರುವ ವಿಚಾರ ತಿಳಿದುಕೊಳ್ಳುವುದು ಎಷ್ಟು ಮುಖ್ಯ…
ಇನ್ನು ಹಲವು ಪ್ರಶ್ನೆ ಉತ್ತರ ಸಿಗಬೇಕಾದರೆ ಒಮ್ಮೆ 19.20.21 ಚಿತ್ರ ನೋಡಿ.
ನೈಜ ಘಟನೆ ಆಧರಿಸಿದ ಈ ಚಿತ್ರಕ್ಕಾಗಿ ನಿರ್ದೇಶಕ ಮಂಸೋರೆ ಹಾಗೂ ತಂಡ ಸಾಕಷ್ಟು ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿ ಸುಂದರವಾದ ಕಥಾಹಂದರವನ್ನು ಹೆಣೆದಿದ್ದಾರೆ. ಆದಿವಾಸಿ ಜನಗಳ ಬದುಕು ಭಾವನೆಗಳ ಜೊತೆಗೆ ಪೊಲೀಸ್ ಇಲಾಖೆಗಳ ನಡುವಳಿಕೆ, ನಕ್ಸಲ್ ನಿಗ್ರಹ ದಳ ಆರ್ಭಟ ಇವರೊಟ್ಟಿಗೆ ಸಹಕರಿಸುವ ಅಧಿಕಾರಿಗಳು ಹಾಗೂ ಕೆಲವು ಮುಖಂಡರು.
ಮುಖ್ಯವಾಗಿ ಸಂವಿಧಾನದಲ್ಲಿರುವ ಆರ್ಟಿಕಲ್ 19.20.21 ರ ಅರಿವು ಪ್ರತಿಯೊಬ್ಬ ನಾಗರಿಕರಿಗೂ ಎಷ್ಟು ಮುಖ್ಯ ಎಂಬುದನ್ನು ತಿಳಿಸಿರುವ ರೀತಿ ಗಮನ ಸೆಳೆಯುವಂತಿದೆ. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಮೂಲ ಜನಾಂಗದ ವ್ಯಕ್ತಿಗಳನ್ನ ಸಂಪರ್ಕಿಸಿ ಉತ್ತಮವಾಗಿ ಚಿತ್ರಕಥೆ ಬರೆದು ಪ್ರೇಕ್ಷಕರ ಮುಂದೆ ತರುವುದರಲ್ಲಿ ನಿರ್ದೇಶಕ ಮಂಸೋರೆ ಯಶಸ್ವಿಯಾಗಿದ್ದಾರೆ. ಚಿತ್ರದ ಓಟ ಮತ್ತಷ್ಟು ವೇಗವಾಗಿಸಬಹುದಿತ್ತು.
ಸಮಾಜಕ್ಕೆ ಒಂದು ಉತ್ತಮ ಚಿತ್ರವನ್ನು ನೀಡಿರುವ ನಿರ್ಮಾಪಕ ದೇವರಾಜ್. ಆರ್. ಇವರೊಟ್ಟಿಗೆ ಸಹ ನಿರ್ಮಾಪಕರಾಗಿ ಸತ್ಯ ಹೆಗಡೆ ಕೂಡ ಸಾತ್ ನೀಡಿದ್ದಾರೆ. ಈ ಚಿತ್ರಕ್ಕೆ ಶಿವು. ಬಿ. ಕುಮಾರ್ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಬಿಂದು ಮಾಲಿನಿ ಸಂಗೀತ ಗಮನ ಸೆಳೆಯುತ್ತದೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿ ಬಂದಿದೆ. ಪ್ರಮುಖ ಪಾತ್ರಧಾರಿ ನಾಯಕ ಶೃಂಗ.ಬಿ. ಬಹಳ ಅಚ್ಚುಕಟ್ಟಾಗಿ ನೈಜಕ್ಕೆ ಹತ್ತಿರ ಎನ್ನುವಂತೆ ಪಾತ್ರವನ್ನು ನಿರ್ವಹಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ವಿಶೇಷವಾಗಿ ಲಾಯರ್ ಪಾತ್ರ ನಿರ್ವಹಿಸುವ ಬಾಲಾಜಿ ಮನೋಹರ್ ಕೋರ್ಟ್ ಅಂಗಳದಲ್ಲಿ ಉತ್ತಮವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ಪ್ರತಿಯೊಂದು ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿ ಗಮನ ಸೆಳೆದಿದ್ದಾರೆ. ಒಟ್ಟಾರೆ ಒಂದು ಸತ್ಯ ಘಟನೆಯ ಚಿತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದು, ಪ್ರತಿಯೊಬ್ಬರು ನೋಡುವಂತ ಚಿತ್ರ ಇದಾಗಿದೆ.