Cini Reviews Cinisuddi Fresh Cini News 

“100” % ಜಾಗೃತಿ ಮೂಡಿಸುವ ಚಿತ್ರ ( ಚಿತ್ರ ವಿಮರ್ಶೆ – ರೇಟಿಂಗ್ : 4.5/5

ವರದಿ:ಎಸ್.ಜಗದೀಶ್ ಕುಮಾರ್
email : sjagadishtv@gmail.com


ರೇಟಿಂಗ್ : 4.5/5

ಚಿತ್ರ : 100
ನಿರ್ದೇಶಕ : ರಮೇಶ್ ಅರವಿಂದ್
ನಿರ್ಮಾಪಕರು : ಉಮಾ , ರಮೇಶ್ ರೆಡ್ಡಿ. ಎo
ಸಂಗೀತ : ರವಿಬಸ್ಸೂರ್ ಛಾಯಾಗ್ರಹಣ : ಸತ್ಯ ಹೆಗಡೆ ತಾರಾಗಣ : ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ, ವಿಶ್ವ ಕರ್ಣ, ಪ್ರಕಾಶ್ ಬೆಳವಾಡಿ, ಬೇಬಿ ಸ್ಮಯಾ, ಶೋಭರಾಜ್, ರಾಜು ತಾಳಿಕೋಟೆ ,ಶಿಲ್ಪಾ ಶೆಟ್ಟಿ ಹಾಗೂ ಮುಂತಾದವರು…

ಇವತ್ತಿನ ಆಧುನಿಕ ಜೀವನ ಎಷ್ಟು ವೇಗವಾಗಿ ಸಾಗುತ್ತಿದೆಯೋ… ಅಷ್ಟೇ ವೇಗವಾಗಿ ನಮ್ಮ ಬದುಕನ್ನು ಕೂಡ ಅಳವಡಿಸಿಕೊಂಡು ಹೋಗುತ್ತಿದ್ದೇವೆ. ಇವತ್ತಿನ ಯಾಂತ್ರಿಕ ಬದುಕಿನಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇಲ್ಲದೆ ಜೀವನವಿಲ್ಲ. ಗಂಡ, ಹೆಂಡತಿ ,ಮಕ್ಕಳು ,ತಂದೆ, ತಾಯಿ, ಅಕ್ಕ, ತಂಗಿ, ತಮ್ಮ, ಅಣ್ಣ ಹೀಗೆ ಸ್ನೇಹಿತರು ಯಾರ್ ಕೈಯಲ್ಲಿ ನೋಡಿದರೂ ಮೊಬೈಲ್. ಇದರ ಬಳಕೆ ಯಾವ ರೀತಿ ಆಗುತ್ತಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಏಕೆಂದರೆ ಇದರಿಂದ ಉಪಯೋಗವೂ ಇದೆ ಹಾಗೆಯೇ ದುರುಪಯೋಗವೂ ನಡೆಯುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಹ್ಯಾಕರ್ಸ್ ಗಳ ಹಾವಳಿ ಮಿತಿ ಮೀರಿ ಹೋಗಿದೆ. ಬಹಳಷ್ಟು ಅನಾಹುತ , ಅವಘಡಗಳು ನಡೆಯುತ್ತಿದ್ದು, ಅದೆಷ್ಟೋ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಫೇಸ್ ಬುಕ್ , ಇನ್ಸ್ಟಾ ಗ್ರಾಮ್ ನಂಥ ಆ್ಯಪ್ ಗಳಲ್ಲಿ ಸಿಗುವ ಗೆಳೆಯ ಗೆಳತಿಯರ ಸ್ನೇಹ , ಸಂಪರ್ಕ ಕೆಲವರ ಬದುಕಿನ ಹಾದಿಯನ್ನೇ ಬದಲಿಸಿ ಅನಾಹುತಗಳಿಗೆ ಕಾರಣವಾಗುತ್ತಿದೆ. ಮೊಬೈಲ್ ನಿಂದ ಆಗುವ ಬೇರೆ ಬೇರೆ ಅವಾಂತರಗಳ ಸೂಕ್ಷ್ಮ ವಿಚಾರಗಳನ್ನು “100” ಚಿತ್ರದ ಮೂಲಕ ತಂಡ ತೆರೆದಿಟ್ಟಿದೆ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ನಾಯಕನ ಸುಂದರ ಕುಟುಂಬದ ಸಂಭ್ರಮ ಹಾಡಿನೊಂದಿಗೆ. ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಮೊಬೈಲ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ.ಚಿತ್ರದ ನಾಯಕ ವಿಷ್ಣು (ರಮೇಶ್ ಅರವಿಂದ್) ಒಬ್ಬ ದಕ್ಷ ಪೊಲೀಸ್ ಆಧಿಕಾರಿ. ಹಿರಿಯ ಅಧಿಕಾರಿಯ ಮಾರ್ಗದಂತೆ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಸಾಗುವ ಇವನು ತನ್ನ ಸುಂದರ ಕುಟುಂಬದೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿರುತ್ತಾನೆ.

ತನ್ನ ಪತ್ನಿ ಅನಘಾ (ಪೂರ್ಣ), ತಂಗಿ ಹಿಮಾ (ರಚಿತಾ ರಾಮ್), ಮಗಳು ಸಾನ್ವಿ (ಸ್ಮಯಾ) ಹಾಗೂ ತನ್ನ ಅಮ್ಮ ನಳೊoದಿಗೆ ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ನೆಮ್ಮದಿಯಾಗಿರುತ್ತಾನೆ. ಪೊಲೀಸ್ ಕೆಲಸ ಅಂದ ಮೇಲೆ ಕೇಸ್ ಗಳು ಬರುವುದು ಸರ್ವೇಸಾಮಾನ್ಯ. ಅದರಲ್ಲೂ ಸೈಬರ್ ಕ್ರೈಮ್ ನ ಕೆಲವು ದುಷ್ಕೃತ್ಯಗಳನ್ನು ಕಂಡು ಹಿಡಿಯುವುದಕ್ಕೆ ಫೋನ್ ಟ್ಯಾಪಿಂಗ್ ಕೆಲಸ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಹಾಗೆಯೇ ಪೊಲೀಸ್ ಕಮೀಷನರ್ ಸದಾನಂದ (ಪ್ರಕಾಶ್ ಬೆಳವಾಡಿ) ವಿಷ್ಣುಗೆ ತಮ್ಮ ಇಲಾಖೆಯ ಕೆಲವು ಕರಪ್ಟ್ ಹಾಗೂ ರಾಜಕೀಯ ವ್ಯಕ್ತಿಗಳ ಬಗ್ಗೆ ಫೋನ್ ಟ್ಯಾಪ್ ಮಾಡಿ ತನಗೆ ರಿಪೋರ್ಟ್ ಮಾಡಲು ಹೇಳುತ್ತಾನೆ.

ಅದರಂತೆ ಫೋನ್ ಕದ್ದಾಲಿಕೆ ಮಾಡಲು ಹೋದಾಗ ಶ್ರೀಮಂತ ಉದ್ಯಮಿಗಳು ಹಾಗೂ ರಾಜಕಾರಿಣಿಗಳ ನಡುವಿನ ಕೋಟ್ಯಂತರ ಲಂಚ ವ್ಯವಹಾರ, ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ ,ರಾಸಲೀಲೆ ಸೇರಿದಂತೆ ಹಲವು ವಿಷಯಗಳು ವಿಷ್ಣುಗೆ ಅಸ್ತ್ರವಾಗಿ ಕಾಣುತ್ತದೆ.

ಇದರ ನಡುವೆ ಉದ್ಯಮಿ ಪತ್ನಿಗೆ ಹರ್ಷ (ವಿಶ್ವ ಕರ್ಣ) ಎಂಬ ಬಾಯ್‍ಫ್ರೆಂಡ್ ಫೇಸ್ ಬುಕ್ ಮೂಲಕ ಪರಿಚಯವಾಗಿ ಆಕೆಯ ಮನಸ್ಸನ್ನು ತನ್ನ ವಾಕ್ಚಾತುರ್ಯದ ಮೂಲಕ ಗೆದ್ದು ಆಕೆಯಿಂದ ಹಣವನ್ನೂ ಕೂಡ ಪಡೆಯುತ್ತಾನೆ. ಇದಲ್ಲದೆ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಹಲವಾರು ಹುಡಿಗೇರನ್ನ ಪರಿಚಯ ಮಾಡಿಕೊಂಡು ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರನ್ನು ತನ್ನತ್ತ ಸೆಳೆದು , ತನ್ನ ಕಾಮದ ಆಸೆಯನ್ನು ತೀರಿಸಿಕೊಳ್ಳುತಿರುತ್ತಾನೆ. ಇವನ ದುಷ್ಕೃತ್ಯಗಳನ್ನು ಬಗ್ಗೆ ಫೋನ್ ಮೂಲಕ ತಿಳಿಯುತ್ತಿರುವಾಗಲೇ ತನ್ನ ಕುಟುಂಬದ ಸದಸ್ಯರು ಇವನ ಬಲೆಗೆ ಬಿದ್ದಿದ್ದಾರೆ. ಎಂಬ ವಿಚಾರ ತಿಳಿಯುತ್ತಿದ್ದಂತೆ ಗಾಬರಿಯಾಗುತ್ತಾನೆ. ಇದು ಸತ್ಯವೋ ಅಲ್ಲವೋ ಎಂಬ ಪರೀಕ್ಷೆ ಮಾಡಲು ಮುಂದಾಗುತ್ತಾನೆ.

ಅದರ ನಡುವೆಯೇ ವಿಷ್ಣು ಫೋನ್ ಕದ್ದಾಲಿಕೆಯಿಂದ ರೆಕಾರ್ಡ್ ಮಾಡಿಕೊಂಡಿದ್ದ ವಿಐಪಿ, ವಿವಿಐಪಿಗಳ ಆಡಿಯೋ ಮೂಲಕ ಅವರ ಹಣದ ವಹಿವಾಟುಗಳಿಗೆ ಅಡ್ಡಿಯಾಗಿ ಬೇರೆಯ ರೂಪ ಕೊಡುತ್ತಾ ಹೋಗುತ್ತಾನೆ. ಒಂದು ಕಡೆ ತನ್ನ ಕೆಲಸದಲ್ಲಿ ಆಗುತ್ತಿರುವ ಏರುಪೇರುಗಳು ಅಲ್ಲಿ ನಡೆಯುತ್ತಿರುವ ಜಾಲದ ಕಾರ್ಯವೈಖರಿ. ಮತ್ತೊಂದೆಡೆ ತನ್ನ ಕುಟುಂಬದಲ್ಲಿ ಎದುರಾಗಿರುವ ಸಮಸ್ಯೆ. ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನ ಎರಡೂ ಕಡೆಗಳಲ್ಲೂ ವಿಷ್ಣು ಇಕ್ಕಟ್ಟಿಗೆ ಸಿಲುಕುವಂತಾಗುತ್ತೆ.
ಒಟ್ಟಾರೆ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವಷ್ಟರಲ್ಲಿ ಚಿತ್ರದ ಹಲವಾರು ಸೂಕ್ಷ್ಮ ವಿಚಾರಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.
ನಾಯಕ ವಿಷ್ಣು ಇಲಾಖೆಯಲ್ಲಿ ಎದುರಿಸುವ ಸಮಸ್ಯೆ ಏನು…
ಕುಟುಂಬದಲ್ಲಿ ಕಾಣುವ ಸಮಸ್ಯೆಗೆ ಪರಿಹಾರ ಸಿಗುತ್ತಾ…
ದುಷ್ಟರ ಹಣದಲ್ಲಿ ವಿಷ್ಣುವಿನ ಕೈವಾಡ ಏನು…
ಹೀಗೆ 100 ಚಿತ್ರದಲ್ಲಿರುವ ಹಲವಾರು ವಿಚಾರಗಳ ಬಗ್ಗೆ ತಿಳಿಯಬೇಕಾದರೆ ನೀವೆಲ್ಲರೂ ಕುಟುಂಬ ಸಮೇತ ಹೋಗಿ ಒಮ್ಮೆ ಈ ಚಿತ್ರವನ್ನ ವೀಕ್ಷಿಸಿ ಸತ್ಯಾಸತ್ಯತೆಗಳ ಬಗ್ಗೆ ಸೂಕ್ಷ್ಮ ವಾಗಿ ತಿಳಿಯಬಹುದಾಗಿದೆ.

ಪ್ರತಿಯೊಬ್ಬ ಜನಸಾಮಾನ್ಯರು ಕೂಡ ಈ ಚಿತ್ರವನ್ನ ವೀಕ್ಷಿಸಬೇಕೆಂಬ ದೃಷ್ಟಿಯಿಂದ ಸುರಜ್ ಪ್ರೊಡಕ್ಷನ್ಸ್ ಮೂಲಕ ಶ್ರೀಮತಿ ಉಮ ಹಾಗೂ ರಮೇಶ್ ರೆಡಿ. ಎಂ ರವರು ಇಂಥ ಒಂದು ವಿಭಿನ್ನ ಚಿತ್ರವನ್ನು ನಿರ್ಮಾಣ ಮಾಡಿರುವ ಸಾಹಸವನ್ನು ಮೆಚ್ಚಲೇ ಬೇಕು. ಈಗಾಗಲೇ ಈ ಚಿತ್ರವನ್ನ ನಮ್ಮ ರಾಜ್ಯದ ಗೃಹ ಮಂತ್ರಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಚಿತ್ರವನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಂದೇಶವಿರುವ ಚಿತ್ರ ಇದಾಗಿದ್ದು , ಪ್ರತಿಯೊಬ್ಬರೂ ನೋಡಲೆಬೇಕು ಎಂದಿದ್ದಾರೆ.

ಇತ್ತೀಚೆಗೆ ಬರುತ್ತಿರುವ ಲವ್ , ಥ್ರಿಲ್ಲರ್, ಹಾರರ್ ಚಿತ್ರಗಳ ನಡುವೆ ವಿಭಿನ್ನ ಬಗೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದರಲ್ಲಿ ನಿರ್ದೇಶಕ ರಮೇಶ್ ಅರವಿಂದ್ ಯಶಸ್ವಿಯಾಗಿದ್ದಾರೆ. ಒಂದೊಳ್ಳೆ ಸಸ್ಪೆನ್ಸ್ , ಥ್ರಿಲ್ಲರ್ ಅಂಶವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದರೆ ಏನೆಲ್ಲಾ ಅನಾಹುತಗಳನ್ನು ತಂದೊಡ್ಡುತ್ತದೆ ಎಂಬುದರ ಜೊತೆಗೆ ಪೋಲಿಸ್ ಇಲಾಖೆ ರಾಜಕಾರಣಿ ಹಾಗೂ ಬಿಸಿನೆಸ್ ಮ್ಯಾನ್ ಗಳ ಎಡವಟ್ಟುಗಳ ಅನಾವರಣವಾಗಿದೆ.

ಈ 100 ಸಿನಿಮಾದಲ್ಲಿ ನಿರ್ದೇಶಕರು ಕಥೆಗೆ ಬೇಕಾದ ಟ್ವಿಸ್ಟ್ ಗಳನ್ನ, ಬಹಳ ಜಾಗೃತವಾಗಿ ಅಳವಡಿಸಿದ್ದಾರೆ.ಅದೇ ರೀತಿ ಒಬ್ಬ ಪೋಲಿಸ್ ಅಧಿಕಾರಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನೂ ಚಿತ್ರದ ಬರುವ ಉಳಿದ ಪಾತ್ರಗಳು ಕೂಡ ಗಮನ ಸೆಳೆಯುವಂತೆ ಮಾಡಿದ್ದು , ಚಿತ್ರದ ತಾಂತ್ರಿಕ ವರ್ಗಗಳ ಕಲಸವನ್ನು ಕೂಡ ಅಷ್ಟೇ ಚೆನ್ನಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ.

ಪ್ರಸ್ತುತ ಫೋನ್ ಹ್ಯಾಕರ್ ಗಳ ವಿಚಾರವಾಗಿ ಎದ್ದಿರುವ ಸದ್ದು , ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳ ವಿಚಾರವನ್ನ ಇನ್ನಷ್ಟು ಆಳವಾಗಿ ತೆರೆದಿಡಬಿಡಬಹುದಿತ್ತು. ಹಾಗೆಯೇ ಇನ್ನೂ ಹಾಸ್ಪಿಟಲ್ ವಿಚಾರವಾಗಲಿ ಹಾಗೂ ಖಳನಾಯಕನಿಗೆ ಇರುವ ಕಾಯಿಲೆ ಬಗ್ಗೆ ಬೆಳಕು ಚೆಲ್ಲುವುದು ಗಮನಾರ್ಹವಾಗಿದೆ.ಒಟ್ಟಾರೆ ಚಿತ್ರದ ಓಟದಲ್ಲಿ ರಮೇಶ್ ಅರವಿಂದ್ ಗೆದ್ದಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಗೆ ಜೋಡಿಯಾಗಿ ಅಭಿನಯಿಸಿರುವ ಬೆಡಗಿ ಪೂರ್ಣ ತೆರೆಮೇಲೆ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಕುಟುಂಬದ ಜವಾಬ್ದಾರಿ ಗೃಹಿಣಿಗೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿದ್ದಾರೆ. ಇನ್ನು ನಾಯಕನ ತಂಗಿಯ ಪಾತ್ರದಲ್ಲಿ ರಚಿತಾ ರಾಮ್ ಕೂಡ ಮನೋಜ್ಞವಾಗಿ ಅಭಿನಯವನ್ನು ನೀಡಿದ್ದಾರೆ. ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕೊಟ್ಟರೆ ಬದುಕಿನಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ತನ್ನ ಪಾತ್ರದ ಮೂಲಕ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇನ್ನು ನಾಯಕನ ತಾಯಿ , ಮಗಳು ಹಾಗೂ ನಾಯಕಿಯ ತಮ್ಮನ ಪಾತ್ರಗಳು ಕೂಡ ಗಮನಾರ್ಹವಾಗಿ ಅಭಿನಯಿಸಿದ್ದಾರೆ. ಇದಲ್ಲದೆ ವಿಶೇಷ ಪಾತ್ರದಲ್ಲಿ ಖಳನಾಯಕನ ಪಾತ್ರ ಮಾಡಿರುವ ಯುವ ನಟ ವಿಶ್ವ ಕರ್ಣ ಭರವಸೆಯ ಖಳನಾಯಕನಾಗಿ ಮಿಂಚುವ ಲಕ್ಷಣಗಳು ಕಾಣುತ್ತಿವೆ. ಸಿಕ್ಕ ಪಾತ್ರವನ್ನು ಬಹಳ ಲೀಲಾಜಾಲವಾಗಿ ಅಭಿನಯಿಸಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.

ಇಡೀ ಚಿತ್ರದ ಹೈಲೈಟ್ ಗಳಲ್ಲಿ ಇವರ ಪಾತ್ರವು ಕೂಡ ಒಂದು , ಇದಕ್ಕೆ ಮತ್ತೊಂದು ಮುಖ್ಯ ಕಾರಣ ಇವರ ಧ್ವನಿ. ಹೌದು ಅವರಿಗೆ ಧ್ವನಿ ನೀಡಿರುವುದು ಬಾಲನಟನಾಗಿ ಹಾಗೂ ನಟನಾಗಿ ಮಿಂಚಿದ ಯುವ ಪ್ರತಿಭೆ ವಿನಾಯಕ್ ಜೋಷಿ. ಇನ್ನು ಮತ್ತೊಂದು ಪ್ರಮುಖ ಪಾತ್ರ ಅಂದ್ರೆ ಪೊಲೀಸ್ ಕಮಿಷನರ್ ಪಾತ್ರ ನಿರ್ವಹಿಸಿರುವ ಪ್ರಕಾಶ್ ಬೆಳವಾಡಿ. ಅವರು ಸ್ಕ್ರೀನ್ ಮೇಲೆ ಬಂದಾಗಲೆಲ್ಲ ಒಂದೊಂದು ತಿರುವು ಕಾಣುವುದು ವಿಶೇಷವಾಗಿದೆ.

ಇನ್ನೂ ಕರಪ್ಟ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಶೋಭರಾಜ್, ರಾಜಕಾರಣಿಯಾಗಿ ರಾಜು ತಾಳಿಕೋಟೆ ಸೇರಿದಂತೆ ಉಳಿದವರು ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.ರವಿ ಬಸ್ರೂರ್ ಅವರ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಸತ್ಯ ಹೆಗಡೆ ಅವರ ಕ್ಯಾಮರಾ ಕೈಚಳಕ ಉತ್ತಮವಾಗಿದೆ.

ಒಟ್ಟಾರೆ ಈ ಚಿತ್ರವನ್ನ ಗಮನಿಸುವುದಾದರೆ, ಪ್ರತಿಯೊಬ್ಬರೂ ಈ 100 ಚಿತ್ರವನ್ನು ನೋಡಲೇಬೇಕು. ಫೋನ್ ಬಳಕೆ ಮಾಡುವವರಿಗೆ ಇದೊಂದು ಸಂದೇಶದ ಚಿತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಹಲವಾರು ದುಷ್ಕೃತ್ಯಗಳ ಬಗ್ಗೆ ಬೆಳಕು ಚೆಲ್ಲಿರುವ ಈ ಚಿತ್ರವನ್ನ ಒಮ್ಮೆ ಚಿತ್ರಮಂದಿರಕ್ಕೆ ಹೋಗಿ ನೋಡಿ. ಒಂದು ಉತ್ತಮ ಚಿತ್ರ ನೋಡಿದ ಅನುಭವ ನಿಮ್ಮದಾಗುತ್ತದೆ.

Related posts