Cini Gossips Cinisuddi Fresh Cini News 

ಮೇ .29 ಕ್ಕೆ ಕ್ರೇಜಿಸ್ಟಾರ್ ಪುತ್ರಿ ಮದುವೆ, ಕನಸುಗಾರನ ಮನೆಯಲ್ಲಿ ಸಂಭ್ರಮ

ಸ್ಯಾಂಡಲ್ ವುಡ್ ನ ಕನಸುಗಾರ, ಪ್ರೇಮಲೋಕದ ಗುರು, ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮುದ್ದಿನ ಮಗಳು ಗೀತಾಂಜಲಿಯ ಮದುವೆ ಸಮಾರಂಭ 28, 29 ರಂದು ಅದ್ದೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇರುವ ವೈಟ್ ಪೆಟಲ್ಸ್ ನಲ್ಲಿ ಎರಡು ದಿನ ನಡೆಯಲಿದೆ.

ಒಂದು ದಿನ ರಿಸೆಪ್ಷನ್‌, ಮತ್ತೊಂದು ದಿನ ಮಹೂರ್ತ ನಡೆಯಲಿದೆ. ಸುಮಾರು 40 ‌ ಎಚ್ ಡಿ ಕ್ಯಾಮೆರಾ ಸೆಟಪ್‌ ಅಳವಡಿಸಲಿದ್ದು , ಚಿತ್ರೋದ್ಯಮದ ಗಣ್ಯರು, ರಾಜಕೀಯದ ಸ್ನೇಹಿತರು, ಪತ್ರಿಕಾ ಮಿತ್ರರು ಹಾಗೂ ಆತ್ಮೀಯರು ಸೇರಿದಂತೆ ಸಾವಿರ ಜನರು ಕೂತು ಆರಾಮಾಗಿ ಮದುವೆ ನೋಡುವ ವ್ಯವಸ್ಥೆ ಮಾಡಲಾಗಿದೆ.

ನೂಕು ನುಗ್ಗಲು ಇರಬಾರದೆಂದು ಎಲ್ಲದಕ್ಕೂ ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗುವುದಂತೆ. ಈ ಒಂದು ಸಮಾರಂಭದಲ್ಲಿ ನಾದಬ್ರಹ್ಮ ಹಂಸಲೇಖ ರವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು , ಬಂದಂತಹ ಅತಿಥಿಗಳಿಗೆ ರಸದೌತನ ಸಿಗಲಿದೆ.

ಇತ್ತೀಚಿಗೆ ನಡೆದ ನಿಶ್ಚಿತಾರ್ಥ ಕೂಡ ಬಹಳ ಅಚ್ಚುಕಟ್ಟಾಗಿ ಯಾವುದೇ ಗೊಂದಲವಿಲ್ಲದೆ ನಡೆದಿತ್ತು. ಅದೇ ರೀತಿ ಮದುವೆ ಕಾರ್ಯಕ್ರಮ ಕೂಡ ನಡೆಯಬೇಕೆಂಬುದು ರವಿಚಂದ್ರನ್ ಅವರ ಆಸೆ. ಹಾಗಾಗಿಯೇ ಮುಂಚಿತವಾಗಿ ಅಚ್ಚುಕಟ್ಟಾಗಿ ಸಂಭ್ರಮವನ್ನು ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ತಂದೆ-ತಾಯಿಗಳಿಗೆ ಮಕ್ಕಳೇ ಒಂದು ಉಡುಗೊರೆ… ಅದೇ ರೀತಿ ಮಕ್ಕಳಿಗೆ ಕೂಡ. ಈ ಪ್ರೀತಿ ಬಾಂಧವ್ಯಕ್ಕೆ ಕೊನೆಯೇ ಇಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್ ತನ್ನ ಮುದ್ದಿನ ಮಗಳಿಗಾಗಿ ಒಂದು ಉಡುಗೊರೆಯನ್ನು ನೀಡಿ ದ್ದಾರೆ. ಹೌದು ತಮ್ಮ ಪುತ್ರಿಗೆ ಕ್ರೇಜಿಸ್ಟಾರ್ ಒಂದು ಮನಮುಟ್ಟುವ ಹಾಡನ್ನು ಕಂಪೋಸ್ ಮಾಡಿದ್ದಾರೆ.

ರವಿಚಂದ್ರನ್ ಪ್ರಕಾರ ಜಗತ್ತಿನ ಅತ್ಯುತ್ತಮ ಪ್ರೇಮ ಅಂದರೆ ಅದು ಅಪ್ಪ- ಮಗಳದ್ದು , ಮಗಳು ಹುಟ್ಟಿದ್ದಾಗ ಅಪ್ಪನೂ ಹುಟ್ಟುತ್ತಾನೆ. ಆದರೆ ಮಗಳು ಬೆಳೆದು ನಿಂತಾಗ ಅಪ್ಪ ಮಗುವಾಗುತ್ತಾನೆ. ನನ್ನ ಈ ಭಾವುಕ ಕನಸುಗಳನ್ನು ಹೇಳುವುದಕ್ಕಾಗಿಯೇ ಈ ಹಾಡನ್ನು ಕಂಪೋಸ್‌ ಮಾಡಿ ನನ್ನ ಮಗಳಿಗೆ ಉಡುಗರೆಯಾಗಿ ನೀಡುತ್ತಿದ್ದೇನೆ ಎಂದರು.

ಮೇ ತಿಂಗಳು ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಬಹಳ ವಿಶೇಷವಾದದ್ದು ಯಾಕೆಂದರೆ… ಮೇ ತಿಂಗಳ 29 ರಂದು ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ , ಅಂದೇ ರವಿಚಂದ್ರನ್ ಅವರ ಪುತ್ರಿಯ ಮದುವೆ ಒಂದೆಡೆಯಾದರೆ , ಮೇ 30 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜನ್ಮ ದಿನ. ಇದು ರವಿಚಂದ್ರನ್ ರವರ ಜೀವನದಲ್ಲಿ ಮರೆಯಲಾಗದ ದಿನಗಳು ಎಂದೇ ಹೇಳಬಹುದು.

ಕ್ರೇಜಿಸ್ಟಾರ್ ರವಿಚಂದ್ರನ್ ಸುಪುತ್ರಿ ಗೀತಾಂಜಲಿ ಹಾಗೂ ಬಿಜಿನೆಸ್ ಮ್ಯಾನ್ ಅಜಯ್ ರವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಲಿ ಎಂಬುವುದು ನಮ್ಮ ಆಶಯ.

Share This With Your Friends

Related posts